ಮಡಿಕೇರಿ, ಜು. 30: ಸಮೀಪದ ಪಾಲಿಬೆಟ್ಟ ಗ್ರಾಮಪಂಚಾಯತಿ ಮೊದಲ ಗ್ರಾಮ ಸಭೆಯನ್ನು ಪುಲಿಯಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಪಂಚಾಯತಿಯನ್ನು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಡಿಜಿಟಲೈಸ್ಡ್ ನಕ್ಷೆಯಲ್ಲಿ ಹಳ್ಳಿಯಮಾಹಿತಿ (ವಿಐಎಸ್- ವಿಲೇಜ್ ಇನ್‍ಫರ್ಮೇಷನ್ ಸಿಸ್ಟಂ) ಯೋಜನೆಯಡಿ ಆಯ್ಕೆ ಮಾಡಿರುವದಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಯೋಜನಾಧಿಕಾರಿ ಪ್ರೊ. ಹೇಮಂತಕುಮಾರ್ ಮಾಹಿತಿ ನೀಡಿದರು. ಗ್ರಾಮ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡದ ಅವರು, ಗ್ರಾಮದ ಪ್ರತಿಯೊಂದು ಕಟ್ಟಡ, ಆಸ್ತಿ, ಮೂಲಭೂತ ಸೌಲಭ್ಯಗಳು ಭೌತಿಕವಾಗಿ ಸರ್ವೆ ನಡೆಸಿ ತಂತ್ರಾಂಶಕ್ಕೆ ಅಳವಡಿಸುವದರಿಂದ ಗ್ರಾಮದ ಸಂಪೂರ್ಣ ಮಾಹಿತಿ, ವಿವಿಧ ಸರಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದರು. ಪವರ್ ಪಾಯಿಂಟ್ ಮೂಲಕ ಮಾಹಿತಿ ನೀಡಿ ಸಾರ್ವಜನಿಕರ ಪ್ರಶ್ನೆಗಳಿಗೆ ಇದೇ ಸಂದರ್ಭ ಉತ್ತರ ನೀಡಿದರು.

ಈ ಯೋಜನೆಗೆ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಕೊಳ್ಳಲಾಯಿತು. ಗ್ರಾಮೀಣ ಸ್ವಚ್ಛ ಸರ್ವೇಕ್ಷಣಾ ಕಾರ್ಯದ ಕುರಿತು ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕ ಅಜ್ಜಿಕುಟ್ಟೀರ ಸೂರಜ್ ಸಭೆಯಲ್ಲಿ ಆಗಸ್ಟ್ 1-31 ರವರೆಗೆ ನಡೆಯುವ ಪರಿವೀಕ್ಷಣೆ ಕುರಿತು ಮಾಹಿತಿ ನೀಡಿದರು. ನಿವೇಶನ ವಸತಿ ಯೋಜನೆಯಡಿ ಫಲಾನುಭಗಳನ್ನು ಆಯ್ಕೆ ಮಾಡಲಾಯಿತು. 14ನೇ ಹಣಕಾಸು ಯೋಜನೆ ಮತ್ತು ವಿವಿಧ ಯೋಜನೆಗಳ ಕಾಮಗಾರಿಗಳ ಕ್ರಿಯಾಯೋಜನೆಯನ್ನು ತಯಾರಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು ಸಭೆಗೆ ಮಾಹಿತಿ ನೀಡಿದರು. ಕಾಡಾನೆ ಹಾವಳಿ ಕುರಿತು ತಾ.ಪಂ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಅರಣ್ಯ ಇಲಾಖೆ ಗಮನಹರಿಸುವಂತೆ ತಿಳಿಸಿದರು ಅರಣ್ಯಾಧಿಕಾರಿ ಶ್ರೀನಿವಾಸ್ ಹಾಜರಿದ್ದು ಮಾಹಿತಿ ನೀಡಿದರು.

ಶಿಸ್ತು ಕ್ರಮ ಸಭೆ ನಿರ್ಣಯ: ಪಾಲಿಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಕುಡಿಯುವ ನೀರಿನ ಮೂಲಗಳಿದ್ದರೂ ನೀರು ಸರಬರಾಜಿಗೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ನೀಡದೆ ಇರುವದು ಹಾಗೂ ಚೆಸ್ಕಾಂ ಅಧಿಕಾರಿ ಲಕ್ಷ್ಮೇ ಗೌಡ ಅವರಿಗೆ ಖುದ್ದು ಹಾಜರಾಗಲು ಪಂಚಾಯತಿ ಲಿಖಿತ ಮನವಿ ಮಾಡಲಾಗಿದ್ದರೂ ಸಭೆಗೆ ಗೈರು ಹಾಜಾಗಿದ್ದು ಯಾವದೇ ಚೆಸ್ಕಾಂ ಸಿಬ್ಬಂದಿಗಳು; ಗ್ರಾಮ ಸಭೆಗೆ ಸ್ಪಂದಿಸದೆ ಅಧ್ಯಕ್ಷರ ದೂರವಾಣಿಗೆ ಕೂಡ ಸ್ಪಂದಿಸದಿರುವ ಬಗ್ಗೆ ಸಭೆಯು ತೀರ್ವ ಆಕ್ಷೇಪ ವ್ಯಕ್ತಪಡಿಸಿ ಪಾಲಿಬೆಟ್ಟ ಚೆಸ್ಕಾಂ ಅಧಿಕಾರಿ ಲಕ್ಷ್ಮೇ ಗೌಡ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಯಿತು.

ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ನೈರ್ಮಲ್ಯ, ವಿವಿಧ ಕಾಮಗಾರಿಗಳ ಅನುಷ್ಠಾನದ ಕುರಿತು ಪಿಡಿಒ ಅಬ್ದುಲ್ಲ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಮಾಹಿತಿ ನೀಡಿ ಸಾರ್ವಜನಿಕರ ವಿವಧ ಬೇಡಿಕೆಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಗ್ರಾ.ಪಂ.ಉಪಾಧ್ಯಕ್ಷೆ ರೇಖಾ ಗಣಪತಿ, ನೋಡಲ್ ಅಧಿಕಾರಿ ಡಾ.ನವೀನ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಕುಟ್ಟಂಡ ದೀಪಕ್ ಗಣಪತಿ, ರಜಾಕ್, ಬಾಬು, ಇಂದಿರಾ, ಲಲಿತ, ಮಲ್ಲಿಕಾ, ಸುಶೀಲ ಪ್ರೊಬೆಷನರಿ ಪಿಡಿಒ ಗಳಾದ ಪುಟ್ಟರಾಜು, ಮಮತ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದು. ಪಿಡಿಒ ಅಬ್ದುಲ್ಲ ಸಭೆಯಲ್ಲಿ ನಿರೂಪಣೆ, ಸ್ವಾಗತಿಸಿ, ನಾಡಗೀತೆಯೊಂದಿಗೆ ಪ್ರಾರಂಭಿಸಿ ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯ ಗೊಳಿಸಲಾಯಿತು.