ಸೋಮವಾರಪೇಟೆ,ಜು.31: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ಹಲವಷ್ಟು ಕೃಷಿ ಬೆಳೆಗಳು ಹಾನಿಯಾಗಿದ್ದು, ಪರಿಹಾರಕ್ಕಾಗಿ ರೈತರು ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸಲು ಪ್ರಯತ್ನಿಸುವದಾಗಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಷ್ಟಕ್ಕೊಳಗಾಗಿರುವ ರೈತರು ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ ಸೇರಿದಂತೆ ನಾಡಕಚೇರಿಗೂ ಅರ್ಜಿ ಸಲ್ಲಿಸಬಹುದು. ಕಂದಾಯ ಇಲಾಖೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಬೇಕು. ಆಯಾ ಇಲಾಖಾಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಗರಿಷ್ಠ ಪ್ರಮಾಣದ ಪರಿಹಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ರಂಜನ್ ಅವರು ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ರೈತರಿಂದ ಅರ್ಜಿಗಳು ಬಂದರೆ ತಕ್ಷಣ ಪರಿಹಾರವನ್ನು ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವದು ಎಂದರು. ಕೃಷಿ ಇಲಾಖಾ ಸಹಾಯಕ ನಿರ್ದೇಶಕ ರಾಜಶೇಖರ್ ಮಾತನಾಡಿ, ಈಗಾಗಲೇ ಮಳೆಯಿಂದ ಹಾನಿಗೊಳಗಾದ ಬಿತ್ತನೆ ಬೀಜಕ್ಕೆ ಬದಲಾಗಿ ಉಚಿತವಾಗಿ ಬಿತ್ತನೆ ಬೀಜ ಒದಗಿಸಲಾಗುತ್ತಿದೆ. ಈಗಾಗಲೇ ಇಲಾಖೆಗೆ 100 ಅರ್ಜಿ ಸಲ್ಲಿಕೆಯಾಗಿದೆ. ಮುಸುಕಿನ ಜೋಳವೂ ಹಾನಿಗೊಳಗಾಗಿದ್ದು, 202 ಮಂದಿ ರೈತರು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಮಣ್ಣು ಆರೋಗ್ಯ ಕಾರ್ಡ್: ತಾಲೂಕಿನಲ್ಲಿ 28 ಸಾವಿರ ರೈತರಿದ್ದು, ಪ್ರತಿಯೋರ್ವರಿಗೂ ಮಣ್ಣು ಅರೋಗ್ಯ ಕಾರ್ಡ್ ವಿತರಿಸಬೇಕು. ಮುಂದಿನ ಮಾರ್ಚ್ ಅಂತ್ಯದೊಳಗೆ ಗುರಿ ಸಾಧಿಸಬೇಕು ಎಂದು ಶಾಸಕರು ಸೂಚಿಸಿದರು.
ಕೃಷಿ ಹೊಂಡ ನಿರ್ಮಿಸಲು ರೈತರು ಮುಂದೆ ಬರಬೇಕು. ಸರ್ಕಾರದಿಂದ ಸಹಾಯಧನದ ಆಧಾರದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಕೃಷಿ ಹೊಂಡ ನಿರ್ಮಿಸಲು ಕೃಷಿ ಇಲಾಖೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜಶೇಖರ್ ಅವರಿಗೆ ನಿರ್ದೇಶನ ನೀಡಿದರು.
ಮೀನುಗಾರಿಕಾ ಇಲಾಖೆಯಿಂದ ಮೀನುಮರಿಗಳ ವಿತರಣಾ ಕಾರ್ಯ ನಡೆಯುತ್ತಿದ್ದು, ಆಸಕ್ತರು ಕಚೇರಿಯನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ತಿಳಿಸಿದರು.