ಸೋಮವಾರಪೇಟೆ, ಜು. 31: ಪ್ರಸಕ್ತ ಸಾಲಿನ ಮಳೆಯಿಂದ ಬೆಳೆಗಾರರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಗಳು ತಕ್ಷಣ ಬೆಳೆಗಾರರ ಹಿತಕಾಪಾಡಲು ಮುಂದಾಗಬೇಕೆಂದು ಕಾಫಿ ಬೆಳೆಗಾರರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಸಂಸದ ಪ್ರತಾಪ್ ಸಿಂಹ ಬೆಳೆಗಾರರ ಸಂಕಷ್ಟದ ಬಗ್ಗೆ ಸಂಸತ್‍ನಲ್ಲಿ ಪ್ರಸ್ತಾಪ ಮಾಡಿದ್ದು, ಕಾಫಿ ಹಾಗೂ ಕರಿಮೆಣಸಿನ ಬೆಲೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಕೊಡಗಿನ ಬೆಳೆಗಾರರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಸ್ಪಂದಿಸಬೇಕು ಎಂಬ ಮನವಿ ಮಾಡಿರುವದನ್ನು ಬೆಳೆಗಾರರ ಸಂಘ ಸ್ವಾಗತಿಸುತ್ತದೆ ಎಂದು ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ತಿಳಿಸಿದ್ದಾರೆ.
ಇದರೊಂದಿಗೆ ಮಳೆ ಹಾನಿ ಪರಿಹಾರ ನಿಧಿಯಡಿ ಆಸ್ತಿ ಪಾಸ್ತಿ ಹಾನಿಗೆ ಪರಿಹಾರದ ಮೊತ್ತ ಕಡಿಮೆಯಿದ್ದು, ಇದನ್ನು ಪರಿಷ್ಕರಿಸಬೇಕು. 2015ರ ಆದೇಶವನ್ನು ತಿರಸ್ಕರಿಸುವ ಮೂಲಕ ಕೊಡಗಿನ ಕಾಫಿ,ಕರಿಮೆಣಸು, ಅಡಿಕೆ ಬೆಳೆಗಾರರು ಹಾಗೂ ರೈತರ ಹಿತದೃಷ್ಟಿ ಕಾಪಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.