ಮಡಿಕೇರಿ, ಜು. 31: ಪ್ರಧಾನ ಮಂತ್ರಿ ಪ್ಯಾನ್ ಇಂಡಿಯಾದಡಿಯಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಯನ್ವಯ 2017ರ ಜನವರಿ, 1ರ ನಂತರ ಮೊದಲ ಪ್ರಸವದ ಗರ್ಭಿಣಿ ಮಹಿಳೆಯರಿಗೆ ರೂ. 5 ಸಾವಿರಗಳ ಪ್ರೋತ್ಸಾಹಧನವನ್ನು ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವದು.

ಸರ್ಕಾರಿ ಹಾಗೂ ಅರೆ ಸರ್ಕಾರಿ ಮಹಿಳಾ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲಾ ಮೊದಲ ಪ್ರಸವದ ಗರ್ಭಿಣಿ ಮಹಿಳೆಯರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ನೋಂದಾವಣೆಗೆ ನಿಗದಿಪಡಿಸಿದ ಅರ್ಜಿ ನಮೂನೆಗಳು ಅಂಗನವಾಡಿ ಕೇಂದ್ರಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತವೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್, ಫಲಾನುಭವಿಯ ಹಾಗೂ ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಸಂಬಂಧಿಸಿದ ಅಂಗನವಾಡಿ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ಅವರು ತಿಳಿಸಿದ್ದಾರೆ.