ಸೋಮವಾರಪೇಟೆ,ಜು.31: ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವದರಿಂದ ಶಾಲಾ ವಾಹನಗಳ ಚಾಲಕರು ಹೆಚ್ಚಿನ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ವೃತ್ತ ನಿರೀಕ್ಷಕ ನಂಜುಂಡೇಗೌಡ ಸಲಹೆ ನೀಡಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆ ಮತ್ತು ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಜಾಗೃತಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೋಮವಾರಪೇಟೆ ಸುತ್ತಮುತ್ತಲಿ ನ ವ್ಯಾಪ್ತಿಯಲ್ಲಿ ಹಲವು ಶಾಲೆಗಳಿದ್ದು, ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಶಾಲಾ ವಾಹನಗಳ ಚಾಲಕರಿಗೆ ಹೆಚ್ಚಿನ ಜವಾಬ್ದಾರಿ ಇದೆ, ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಚಾಲಕರು ಗಮನಹರಿಸಬೇಕು ಎಂದರು.
ಮದ್ಯ ಸೇವಿಸಿ ವಾಹನ ಚಾಲನೆ ಮಾಡಬಾರದು. ಚಾಲನಾ ಸಂದರ್ಭ ಅಗತ್ಯ ದಾಖಲಾತಿಗಳನ್ನು ಹೊಂದಿರ ಬೇಕು ಎಂದು ವೃತ್ತ ನಿರೀಕ್ಷಕರು ತಿಳಿಸಿದರು.
ಸೋಮವಾರಪೇಟೆ ಠಾಣಾಧಿಕಾರಿ ಶಿವಣ್ಣ ಮಾತನಾಡಿ, ಪಟ್ಟಣದಲ್ಲಿ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡು ವಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಠಾಣೆಗೆ 20 ಬ್ಯಾರಿಕೇಡ್ಗಳನ್ನು ನೀಡಿದ್ದಾರೆ. ಇನ್ನೂ ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ರೋಟರಿ ಸಂಸ್ಥೆಯವರು ಇಲಾಖೆ ಯೊಂದಿಗೆ ಕೈಜೋಡಿಸುವ ದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ಪಟ್ಟಣ ಪಂಚಾಯಿತಿ ಆಡಳಿತ ಪಾರ್ಕಿಂಗ್ ವ್ಯವಸ್ಥೆ ಕುರಿತು ನಿರ್ಲಕ್ಷ್ಯ ತಾಳಿದೆ. ವಾಹನ ನಿಲುಗಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಹಾಗೂ ಯುವಕರು ಅತೀ ವೇಗದ ಚಾಲನೆ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ಚಾಲನೆ ಮಾಡುತ್ತಿದ್ದಾರೆ. ಏನಾದರೂ ಅವಘಡ ಗಳು ಸಂಭವಿಸಿದರೆ, ಭವಿಷ್ಯದಲ್ಲಿ ಇವರುಗಳನ್ನೇ ನಂಬಿರುವ ಪೋಷಕರು ನಿರಾಶ್ರಿತರಾಗುತ್ತಾರೆ ಎಂದು ಅಭಿಪ್ರಾಯಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯೆ ಲೀಲಾ ನಿರ್ವಾಣಿ ಮಾತನಾಡಿ, ನಗರದ ಗ್ರಂಥಾಲಯ ಮುಂಭಾಗದಲ್ಲಿ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ತಡೆಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ. ರವಿ ವಹಿಸಿದ್ದರು. ರೋಟರಿ ಸದಸ್ಯರುಗಳಾದ ಹೆಚ್.ಸಿ. ನಾಗೇಶ್, ಮಂಜು ನೀಲಕಂಠ್, ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಹಿಂದೂ ಜಾಗರಣ ವೇದಿಕೆಯ ಸದಸ್ಯ ಉಮೇಶ್, ವಿಶ್ವಕರ್ಮ ಸಮಾಜದ ಮುಖಂಡ ದೇವದಾಸ್ ಮತ್ತಿತರರು ಈ ಸಂದರ್ಭ ಸಲಹೆ ನೀಡಿದರು.
ವೇದಿಕೆಯಲ್ಲಿ ಶನಿವಾರಸಂತೆ ಠಾಣೆಯ ಉಪ ನಿರೀಕ್ಷಕ ಮರಿಸ್ವಾಮಿ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಪಿ.ನಾಗೇಶ್, ವಲಯ ಸೇನಾನಿ ಭರತ್ ಭೀಮಯ್ಯ ಉಪಸ್ಥಿತರಿದ್ದರು.