ಕುಶಾಲನಗರ, ಜು. 30: ಕುಶಾಲನಗರ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ ನಡೆಯಿತು. ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ರಾಜ್ಯಪಾಲ ಡಾ.ಗೀತ್‍ಪ್ರಕಾಶ್ ಅವರು 2018-19ರ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ಮಾತನಾಡಿದ ಡಾ.ಗೀತ್‍ಪ್ರಕಾಶ್, ಮುಂದಿನ 2020 ರ ವೇಳೆಯಲ್ಲಿ ಲಯನ್ಸ್ ಕ್ಲಬ್‍ನ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಶೇ.50 ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದರು. ಲಯನ್ಸ್ ಕ್ಲಬ್ ಮೂಲಕ ಸದಸ್ಯರು ಸಮಾಜದ ತಳಮಟ್ಟದ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವದ ರೊಂದಿಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಸಿ.ಆರ್. ನಾಗರಾಜ್ ಅವರು ನೂತನ ಸಾಲಿನ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಸಿ.ಆರ್.ನಾಗರಾಜ್, ಮುಂದಿನ ಸಾಲಿನಲ್ಲಿ ಲಯನ್ಸ್ ಕ್ಲಬ್ ಜಾಗದಲ್ಲಿ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳುವದರೊಂದಿಗೆ ಉದ್ದೇಶಿತ ಕಣ್ಣಿನ ಆಸ್ಪತ್ರೆ ತೆರೆಯಲು ಯೋಜನೆ ರೂಪಿಸಲಾಗಿದೆ ಎಂದರು.

ಸಮಾರಂಭದಲ್ಲಿ ಲಯನ್ಸ್ ಕ್ಲಬ್‍ನ ಉತ್ತಮ ಸೇವೆಗಾಗಿ ಹಿರಿಯ ಸದಸ್ಯ ಪೊನ್ನಚ್ಚನ ಮೋಹನ್ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ವೇದಿಕೆಯಲ್ಲಿ ಲಯನ್ಸ್ ವಲಯ ಅಧ್ಯಕ್ಷ ಮಹೇಶ್, ಮಂದಣ್ಣ, ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್, ನಿಕಟಪೂರ್ವ ಕಾರ್ಯದರ್ಶಿ ಡಾ.ಪ್ರವೀಣ್, ನೂತನ ಕಾರ್ಯದರ್ಶಿ ಕೊಡಗನ ಹರ್ಷ, ಖಜಾಂಚಿ ಹೆಚ್.ಎಂ.ಗಣೇಶ್, ಕವಿತಾ ಮೋಹನ್ ಮತ್ತಿತರರು ಇದ್ದರು.