ಲೋಕೇಶ್ ಹಾಗೂ ತನ್ನ ನಡುವೆ ವ್ಯಾಜ್ಯವಿದ್ದು, ಈ ಹಿನ್ನೆಲೆಯಲ್ಲಿ ಲೋಕೇಶ್ ಈ ಕೃತ್ಯವೆಸಗಿದ್ದಾನೆ. ಈ ಪ್ರಕರಣಕ್ಕೂ ಮಹೇಶ್‍ಗೂ ಯಾವದೇ ಸಂಬಂಧವಿಲ್ಲ ಎಂದು ಮಹೇಶ್‍ನ ಸಹೋದರಿ ಟಿ.ಎಂ. ಅಮಿತಾ ಹಾಗೂ ಬಾವ ಪಿ. ಶಶಿ ಇವರುಗಳು ಸ್ಪಷ್ಟಪಡಿಸಿದ್ದಾರೆ.‘ಶಕ್ತಿ’ ಕಚೇರಿಯಲ್ಲಿ ಈ ಕುರಿತು ಅಮಿತಾ ದಂಪತಿ ಈ ಕೆಳಗಿನಂತೆ ಮಾಹಿತಿ ನೀಡಿದ್ದಾರೆ. ಜನಾರ್ಧನ ಅವರ ಮನೆಗೆ ಗುಂಡು ಹಾರಿಸಿರುವ ಪ್ರಕರಣದ ಪ್ರಮುಖ ಆರೋಪಿ ಲೋಕೇಶ್ ಹಾಗೂ ತನ್ನ ಸಹೋದರ ಮಹೇಶ್ ಪರಿಚಿತ ರಾಗಿದ್ದರು. ಆದರೆ, ಮಹೇಶ್ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿ ಜೈಲು ಸೇರಿದ ಬಳಿಕ ಲೋಕೇಶ್ ಆಗಿಂದಾಗ್ಗೆ ಸರಕಾರಿ ಬಸ್ ನಿಲ್ದಾಣದಲ್ಲಿರುವ ತನ್ನ ಅಂಗಡಿಗೆ ರಾತ್ರಿ ವೇಳೆ ಮದ್ಯಪಾನ ಮಾಡಿ ಬಂದು ಅಂಗಡಿಯಲ್ಲಿ ಕೆಲಸಕ್ಕಿದ್ದ ಹುಡುಗನೊಂದಿಗೆ ಜಗಳವಾಡಿ ಹಲ್ಲೆ ಮಾಡುತ್ತಿದ್ದ. ಇದೇ ರೀತಿ ತಾ. 10.4.2018 ರಂದು ಕೂಡ ಮಧ್ಯರಾತ್ರಿ ಅಂಗಡಿಗೆ ಕುಶಾಲಪ್ಪ ಎಂಬಾತನೊಂದಿಗೆ
(ಮೊದಲ ಪುಟದಿಂದ) ಬಂದು ಅಂಗಡಿಯ ಕೆಲಸದವನಾದ ಮಹೇಶ್ ಎಂಬಾತನ ಮೇಲೆ ವಿನಾಕಾರಣ ಲೋಕೇಶ್ ಹಾಗೂ ಕುಶಾಲಪ್ಪ ಹಲ್ಲೆ ಮಾಡಿದ್ದರು. ಈ ವಿಚಾರ ತಿಳಿದ ತಾನು ಮನೆಯಿಂದ ಅಂಗಡಿಗೆ ಬಂದು ಹಲ್ಲೆ ಮಾಡಿದ ಬಗ್ಗೆ ಪ್ರಶ್ನಿಸಿದಾಗ ಲೋಕೇಶ್ ಹಾಗೂ ಕುಶಾಲಪ್ಪ ತನಗೆ ಚಾಕು ತೋರಿಸಿ ಬೆದರಿಸಿದ್ದಲ್ಲದೆ, ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಈ ಕುರಿತು ತಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ ಎಂದು ಅಮಿತಾ ತಿಳಿಸಿದರು.
ತನ್ನ ವಿರುದ್ಧ ನೀಡಿರುವ ದೂರನ್ನು ಹಿಂತೆಗೆದುಕೊಳ್ಳುವಂತೆ ಆಗಿಂದಾಗ್ಗೆ ಲೋಕೇಶ್ ತನಗೆ ಒತ್ತಡ ಹೇರುತ್ತಿದ್ದ. ಆದರೂ ತಾನು ಒಪ್ಪಿರಲಿಲ್ಲ. ಸಹೋದರ ಮಹೇಶ್ ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪೆರೋಲ್ ಆಧಾರದಲ್ಲಿ ಹೊರಗಿದ್ದಾನೆ. ಆದರೆ ಲೋಕೇಶ್ ಪ್ರಕರಣದಲ್ಲಿ ಆತನ ಪಾತ್ರವಿಲ್ಲ. ವಿನಾಕಾರಣ ಮಹೇಶ್‍ನ ಹೆಸರನ್ನು ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ. ನನ್ನ ಮನೆ ಎಂದು ತಿಳಿದು ಜನಾರ್ಧನ ಅವರ ಮನೆಯ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ಧ ತನಗೆ ಕೇಳಿಸಿತ್ತಾದರೂ, ವಿಚಾರ ಗೊತ್ತಿರಲಿಲ್ಲ. ಮರುದಿನ ವಿಷಯ ತಿಳಿದಾಗ ಬರಸಿಡಿಲು ಬಡಿದಂತಾಗಿದ್ದು, ತಮಗೆ ಜೀವ ಭಯ ಕಾಡಲಾರಂಭಿಸಿದೆ. ತನ್ನ ಮೇಲೆ ಅತ್ಯಾಚಾರಕ್ಕೆ ಮುಂದಾದ ಬಗ್ಗೆ ಲೋಕೇಶ್ ವಿರುದ್ಧ ತಾನು ನೀಡಿದ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಲೋಕೇಶ್ ವಿರುದ್ಧ ಕ್ರಮಕೈಗೊಂಡಿದ್ದರೆ ಆತ ಇಂತಹ ಕೃತ್ಯವೆಸಗುತ್ತಿರಲಿಲ್ಲ ಎಂದು ಅಮಿತಾ ದಂಪತಿ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.