ಬೆಂಗಳೂರು, ಜು. 30: ಶಾಲೆ - ಕಾಲೇಜುಗಳಿಗೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೊಠಡಿ, ಶೌಚಾಲಯ, ಪ್ರಯೋಗಾಲಯ ಮತ್ತಿತರ ಸೌಲಭ್ಯ ಒದಗಿಸಲು ರಾಜ್ಯ ಸರಕಾರ ಉದ್ದೇಶಿಸಿದೆ. ಅದೇ ರೀತಿ 4 ಸಾವಿರಕ್ಕೂ ಹೆಚ್ಚು ಕಿ.ಮೀ. ಹೆದ್ದಾರಿ ಕಾಮಗಾರಿ ಪೂರ್ಣ ಗೊಳಿಸಲು ಅಗತ್ಯ ಭೂಸ್ವಾಧೀನ ಮತ್ತಿತರ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ವಸತಿ ಯೋಜನೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸರ್ಕಾರಿ ಜಮೀನು ಗುರುತಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚಿಸಿದರು.
ಅವರು ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸಾಲ ಮನ್ನಾ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದು ಎಂದು ನುಡಿದರು. ಮಧ್ಯವರ್ತಿಗಳು ಈ ಯೋಜನೆಯ ದುರುಪಯೋಗ ಪಡೆಯದಂತೆ ಎಚ್ಚರಿಕೆ ವಹಿಸಿ ಎಂದು ಅವರು ಕಿವಿ ಮಾತು ಹೇಳಿದರು.
ಜನರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಿ. ಪ್ರತಿ ತಿಂಗಳು ತಾಲೂಕುಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ; ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಸುಮಾರು 49,000 ರೂ. ಗಳಷ್ಟು ಬೃಹತ್ ಮೊತ್ತದ ಕೃಷಿ ಸಾಲ ಮನ್ನಾ ಮಾಡಲಾಗಿದ್ದು, ಈ ಕುರಿತು 4-5 ದಿನಗಳಲ್ಲಿ ಸರಕಾರಿ ಆದೇಶ ಹೊರಡಿಸಲಾಗುವದು. ಈ ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಡಾ.ಜಿ. ಪರಮೇಶ್ವರ್ ಕರೆ
ಸಭೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಜಿಲ್ಲಾಧಿಕಾರಿ, ಸಿಇಒ ಯಾರೇ ಆಗಲಿ ಸರಕಾರವನ್ನು ಲಘುವಾಗಿ ಪರಿಗಣಿಸದೇ ಸರಕಾರದ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವತ್ತ ಬದ್ಧತೆ ಪ್ರದರ್ಶಿಸಿ ಎಂದು ಹೇಳಿದರು. ಸರಕಾರದಲ್ಲಿ ಹಣದ ಕೊರತೆ ಇಲ್ಲ. ಪ್ರತಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕನಿಷ್ಟ 5 ಕೋಟಿ ರೂ. ಹಾಕಲಾಗಿದೆ. ಜಿಲ್ಲಾಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡಬೇಕು.
ಜಿಲ್ಲಾ ಮುಖ್ಯ ನಿರ್ವಹಣಾಧಿಕಾರಿಗಳು ಹೋಬಳಿ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಿಂಗಳಿಗೆ ಒಮ್ಮೆಯಾದರೂ ಗ್ರಾಮ ವಾಸ್ತವ್ಯ ಮಾಡಿದರೆ ಆ ಜನರ ಸಮಸ್ಯೆ, ಬೇಡಿಕೆಗಳು ನಿಮ್ಮ ಗಮನಕ್ಕೆ ಬರಲಿದೆ. ಜಿಲ್ಲಾಧಿಕಾರಿಗಳ ಹಂತದಲ್ಲೇ ಸಮಸ್ಯೆ ನೀಗಿಸಿದರೆ ಜನರು ಸಚಿವರವರೆಗೂ ಬರುವ ಸಮಸ್ಯೆ ತಪ್ಪಲಿದೆ. ನನ್ನ ಬಳಿಯೇ ಸಾಕಷ್ಟು ಜನರು ಬಂದು ಸಮಸ್ಯೆ ತೋಡಿಕೊಳ್ಳುತ್ತಾರೆ. ಅವರು ನಮ್ಮ ಬಳಿ ಬರುತ್ತಿದ್ದಾರೆಂದರೆ ನೀವು ಕೆಲಸ ಮಾಡುತ್ತಿಲ್ಲ ಎಂದರ್ಥ ಅಲ್ಲವೇ ಎಂದು ಕುಟುಕಿದರು. ಸಣ್ಣ ಕೆಲಸಕ್ಕೂ ಜನ ವರ್ಷಾನುಗಟ್ಟಲೆ ಕಾಯುವಂಥ ಸ್ಥಿತಿ ಇದೆ. ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆದು ಸಂಪೂರ್ಣ ವ್ಯವಸ್ಥೆ ಪಡೆದುಕೊಳ್ಳಲು ಮೂರ್ನಾಲಕ್ಕು ವರ್ಷ ತೆಗೆದುಕೊಳ್ಳುತ್ತದೆ ಎಂದರೆ ಹೇಗೆ? ಜಿಲ್ಲಾಸ್ಪತ್ರೆಗಳ ವೈದ್ಯರು, ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಸರಕಾರಕ್ಕೆ ಪತ್ರ ಬರೆದು ಸಮಸ್ಯೆ ನೀಗಿಸಿ. ಹಳ್ಳಿಗಳಲ್ಲಿಯೂ ಡ್ರಗ್ ವ್ಯಾಪಿಸಿದೆ ಎಂದರೆ, ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಎಚ್ಚರಿಕೆ ವಹಿಸಿಲ್ಲವಾ? ಜಿಲ್ಲೆಗಳಲ್ಲಿ ಡ್ರಗ್ ಸಂಬಂಧ ಜಾಗೃತಿ ಕಾರ್ಯಕ್ರಮ ಮೂಡಿಸಬೇಕು. ಆದರೆ, ಈ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗ ಕೊಡಿಸಲು ಅವಕಾಶ ಕಲ್ಪಿಸಬೇಕು. ಜನ ಸಾಮಾನ್ಯರನ್ನು ನೇರವಾಗಿ ಭೇಟಿ ಮಾಡುವಂತೆ ಸೂಚಿಸಿದರು.
ಸರ್ಕಾರ ನಡೆಸುವ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಮೂಲ ಸೌಕರ್ಯ ಆಹಾರ ಗುಣಮಟ್ಟ ಪರಿಶೀಲಿಸಬೇಕು. ಅದರಂತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೂ ಭೇಟಿ ನೀಡಿ ಆಯಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಪ್ರೇರೇಪಿಸಿ ಎಂದು ಸಲಹೆ ನೀಡಿದರು. ಕೊಡಗು ಜಿಲ್ಲೆಯಿಂದ ಜಿಲ್ಲಾಧಿಕಾರಿ ಶ್ರೀ ವಿದ್ಯಾ, ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಪಾಲ್ಗೊಂಡಿದ್ದರು.