ಸೋಮವಾರಪೇಟೆ, ಜು.30: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತ ಗೊಂಡಿರುವ ಅಂಬೇಡ್ಕರ್ ವಸತಿ ಶಾಲೆಗೆ ಅಗತ್ಯವಾಗಿ ಸಭಾಂಗಣವನ್ನು ಒದಗಿಸುವಂತೆ ಅಧಿಕಾರಿಗಳು ನಿರ್ದೇಶನ ನೀಡಿದ್ದರೂ ಸಹ ಇದನ್ನು ಪಾಲಿಸದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ರಮವನ್ನು ಖಂಡಿಸಿ ಸ್ವತಃ ಶಾಸಕರೇ ಸಭಾಂಗಣವನ್ನು ಖಾಲಿ ಮಾಡಿಸಿದ ಘಟನೆ ನಡೆಯಿತು.ಈಗ ಸ್ಥಳಾಂತರಗೊಂಡಿರುವ ಕಟ್ಟಡದಲ್ಲಿ ಮಕ್ಕಳಿಗೆ ತಂಗಲು ಕೊಠಡಿಗಳ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಹಾಗೆಯೇ ಉಳಿದುಕೊಂಡಿರುವ ಸಭಾಂಗಣವನ್ನು ಖಾಲಿ ಮಾಡಿ ಅಂಬೇಡ್ಕರ್ ವಸತಿ ಶಾಲೆಗೆ ವಹಿಸು ವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಸಹ ಅಧಿಕಾರಿಗಳು ಕಾರ್ಯರೂಪಕ್ಕೆ ಇಳಿದಿರಲಿಲ್ಲ ಎನ್ನಲಾಗಿದೆ.ಇಂದು ಮಧ್ಯಾಹ್ನ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ರಂಜನ್ ಅವರು,
(ಮೊದಲ ಪುಟದಿಂದ) ಮಕ್ಕಳ ಸ್ಥಿತಿಗತಿ ಕಂಡು ಆಕ್ರೋಶಿತರಾದರಲ್ಲದೇ, ಸಭಾಂಗಣವನ್ನು ಶಾಲೆಯ ವಶಕ್ಕೆ ಒಪ್ಪಿಸದ ಇಲಾಖೆಯ ಕ್ರಮಕ್ಕೆ ಸಿಡಿಮಿಡಿಗೊಂಡರು. ಯಾವದೇ ಉಪಯೋಗಕ್ಕೆ ಇಲ್ಲದ ಸಭಾಂಗಣವನ್ನು ವಸತಿ ಶಾಲೆಗೆ ವಹಿಸುವಂತೆ ತಿಳಿಸಿದ್ದರೂ ಸಹ ಕಾರ್ಯೋನ್ಮುಖರಾಗದ ಸಿಬ್ಬಂದಿಗಳ ಕ್ರಮಕ್ಕೆ ಆಕ್ರೋಶಗೊಂಡು ಸ್ವತಃ ತಾವೇ ಸಭಾಂಗಣದ ಒಳಗೆ ಜೋಡಿಸಿದ್ದ ಪುಸ್ತಕಗಳನ್ನು ಜೂನಿಯರ್ ಕಾಲೇಜು ಬಳಿಯಿರುವ ಕಟ್ಟಡಕ್ಕೆ ಸ್ಥಳಾಂತರಿಸಿದರು.
ಸರ್ಕಾರದಿಂದ ಬಂದಿರುವ ಪಠ್ಯಪುಸ್ತಕಗಳನ್ನು ತಾಲೂಕಿನ ಶಾಲೆಗಳಿಗೆ ವಿತರಿಸಲೆಂದು ಸಂಗ್ರಹಿಸಿಟ್ಟಿದ್ದ ಸಭಾಂಗಣವನ್ನು ತೆರೆಸಿದ ಶಾಸಕರು, ವಸತಿ ಶಾಲೆಯ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರ ಸಹಕಾರದೊಂದಿಗೆ ಸಾವಿರಾರು ಪುಸ್ತಕಗಳನ್ನು ವಾಹನಕ್ಕೆ ತುಂಬಿಸಿ, ಜೂನಿಯರ್ ಕಾಲೇಜು ಬಳಿಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಿದರು.
ಸುಮಾರು 2 ಗಂಟೆಗಳ ಕಾಲ ನಡೆದ ತೆರವು ಕಾರ್ಯಾಚರಣೆಯಲ್ಲಿ ಸ್ವತಃ ಶಾಸಕರೇ ಭಾಗವಹಿಸಿ ಬೆವರಿಳಿಸಿಕೊಂಡರು. ಪ್ರಥಮವಾಗಿ ರಂಜನ್ ಅವರೇ ಪುಸ್ತಕಗಳನ್ನು ಹೊರಗೆ ತಂದು ವಾಹನಕ್ಕೆ ಜೋಡಿಸುತ್ತಿದ್ದುದನ್ನು ಕಂಡ ಪೋಷಕರು ನಂತರ ಶಾಸಕರೊಂದಿಗೆ ಕೈಜೋಡಿಸಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ ಅವರುಗಳು ಶಾಸಕರೊಂದಿಗೆ ಸೇರಿಕೊಂಡು ಸಭಾಂಗಣವನ್ನು ಬಿಟ್ಟುಕೊಡಲು ಸಹಕರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಅಂಬೇಡ್ಕರ್ ವಸತಿ ಶಾಲೆಯಲ್ಲಿ 100 ವಿದ್ಯಾರ್ಥಿಗಳಿದ್ದು, ಈಗಿರುವ ಒಂದು ಸಭಾಂಗಣ ಸಾಕಾಗದ ಹಿನ್ನೆಲೆ ಮತ್ತೊಂದು ಸಭಾಂಗಣವನ್ನು ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿಗಳೇ ನಿರ್ದೇಶನ ನೀಡಿದ್ದರು. ಆದರೆ ಇದುವರೆಗೂ ಬಿಟ್ಟು ಕೊಟ್ಟಿರಲಿಲ್ಲ. ಈ ಬಗ್ಗೆ ಪೋಷಕರು ತಮ್ಮ ಬಳಿ ಅಳಲು ತೋಡಿಕೊಂಡಿದ್ದು, ಅದರಂತೆ ಸಭಾಂಗಣವನ್ನು ತೆರವುಗೊಳಿಸಿ ಶಾಲೆಗೆ ಬಿಟ್ಟುಕೊಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ ಎಂದರು.