ಮಡಿಕೇರಿ, ಆ. 2: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಡೆಯುವ ವಿಶ್ವ ಛಾಯಾಗ್ರಾಹಕ ದಿನಾಚರಣೆ ಪ್ರಯುಕ್ತ ತಾ.12 ರಂದು ಮಡಿಕೇರಿಯಲ್ಲಿ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ ಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರೆಸ್ ಕ್ಲಬ್ ಸದಸ್ಯತ್ವ ಪಡೆದಿರುವ ಪತ್ರಿಕೋದ್ಯಮ ವೃತ್ತಿಯಲ್ಲಿರುವ ಸುದ್ದಿ ಛಾಯಾಗ್ರಾಹಕರು ಹಾಗೂ ವಿಡಿಯೋ ಜರ್ನಲಿಸ್ಟ್ಗಳು ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಬೆಳಿಗ್ಗೆ 10.30 ಗಂಟೆಗೆ ಸ್ಪರ್ಧಿಗಳು ಪತ್ರಿಕಾ ಭವನದಲ್ಲಿ ಹಾಜರಿರಬೇಕು. ಬಳಿಕ ಸ್ಪರ್ಧೆ ನಡೆಯುವ ಸ್ಥಳಕ್ಕೆ ಸ್ಪರ್ಧಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಸ್ಥಳದಲ್ಲಿಯೇ ವಿಷಯ ನೀಡಲಾಗುವದೆಂದು ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಕ್ಲಬ್ ಆಡಳಿತ ಮಂಡಳಿ ಸಭೆಯಲ್ಲಿ ಕಾರ್ಯಕ್ರಮ ಆಯೋಜನೆ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗಿದೆ. ಆ.19 ರಂದು ಪತ್ರಿಕಾ ಭವನದಲ್ಲಿ ನಡೆಯುವ ವಿಶ್ವ ಛಾಯಾಗ್ರಾಹಕ ದಿನಾಚರಣೆಯಲ್ಲಿ ತೀರ್ಪುಗಾರರು ಬಹುಮಾನಕ್ಕೆ ಆಯ್ಕೆ ಮಾಡಲಿದ್ದಾರೆ. ಎರಡು ವಿಭಾಗದಲ್ಲಿಯೂ ಪ್ರಥಮ ಮೂರು ಸ್ಥಾನ ಪಡೆಯುವವರಿಗೆ ತಲಾ 5 ಸಾವಿರ, 3 ಸಾವಿರ ಹಾಗೂ 2 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಪತ್ರಿಕೋದ್ಯಮ ವೃತ್ತಿಗೆ ಬಳಸುವ ಕ್ಯಾಮರಾ ಮಾತ್ರ ಬಳಸಲು ಅವಕಾಶವಿರುತ್ತದೆ. ವಿಡಿಯೋ ಚಿತ್ರೀಕರಣಕ್ಕೆ 30 ನಿಮಿಷ ಸಮಯಾವಕಾಶ ಇದ್ದು, 3 ನಿಮಿಷಗಳ ವಿಡಿಯೋ ಚಿತ್ರೀಕರಿಸಿ ನೀಡಬೇಕು. ಛಾಯಾ ಚಿತ್ರ ತೆಗೆಯಲು 30 ನಿಮಿಷಗಳ ಕಾಲಾವಕಾಶವಿದ್ದು, ಒಂದು ಚಿತ್ರ ಮಾತ್ರ ನೀಡಬೇಕು. ಒಬ್ಬರಿಗೆ ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದಾಗಿದೆ.
ವೃತ್ತಿಯಲ್ಲಿರುವ ಕ್ಲಬ್ ಸದಸ್ಯ ವಿಡಿಯೋಗ್ರಾಫರ್ ಮತ್ತು ಸುದ್ದಿ ಛಾಯಾಗ್ರಾಹಕರಿಗೆ ಮಾತ್ರ ಅವಕಾಶವಿರುತ್ತದೆ. ಚಿತ್ರೀಕರಿಸಿದ ವಿಡಿಯೋ ಮತ್ತು ತೆಗೆದ ಛಾಯಾಚಿತ್ರವನ್ನು ಸ್ಥಳದಲ್ಲಿಯೇ ನೀಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಾ.8 ರೊಳಗೆ ಕಾರ್ಯಕ್ರಮದ ಸಂಚಾಲಕ ವಿಘ್ನೇಶ್ ಎಂ. ಭೂತನಕಾಡು (8277021535), ಸಹ ಸಂಚಾಲಕ ಎಂ.ಎ. ಅಜೀಜ್ (8971214181) ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಶಿಸ್ತು ಪಾಲನಾ ಸಮಿತಿ: ಕೊಡಗು ಪ್ರೆಸ್ ಕ್ಲಬ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರನ್ನಾಗಿ ಕ್ಲಬ್ ಉಪಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಮಿತಿ ಸದಸ್ಯರನ್ನಾಗಿ ಜಂಟಿ ಕಾರ್ಯದರ್ಶಿ ನಾಗರಾಜಶೆಟ್ಟಿ, ನಿರ್ದೇಶಕ ಎಸ್.ಎಂ. ಮುಬಾರಕ್ ಅವರನ್ನು ಆಯ್ಕೆ ಮಾಡಲಾಗಿದೆ. ಕ್ಲಬ್ ಸದಸ್ಯರ ನಡಾವಳಿಕೆಗೆ ಸಂಬಂಧಿಸಿದಂತೆ ದೂರು ಬಂದಲ್ಲಿ ಶಿಸ್ತು ಪಾಲನಾ ಸಮಿತಿ ವಿಚಾರಣೆ ನಡೆಸಿ ವರದಿ ನೀಡಲಿದ್ದು, ವರದಿ ಆಧಾರದಲ್ಲಿ ಮಂಡಳಿ ತೀರ್ಮಾನ ತೆಗೆದುಕೊಳ್ಳಲಿದೆ.
ಸಹಯೋಗ
ಕೊಡವ ಮಕ್ಕಡ ಕೂಟದ ಆಶ್ರಯದಲ್ಲಿ ತಾ.17 ರಂದು ಹಮ್ಮಿಕೊಂಡಿರುವ ಪ್ರೆಸ್ ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು ಅವರ ಚೊಚ್ಚಲ ಕೃತಿ ಅನಾವರಣ ಕಾರ್ಯಕ್ರಮ ಹಾಗೂ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಳ್ಳಲಿರುವ ತಾಲೂಕು ಮಟ್ಟದ ವಚನ ಗಾಯನ ಸ್ಪರ್ಧೆಗೆ ಪ್ರೆಸ್ ಕ್ಲಬ್ ವತಿಯಿಂದ ಸಹಯೋಗ ನೀಡಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಖಜಾಂಚಿ ರೆಜಿತ್ಕುಮಾರ್ ಗುಹ್ಯ, ಉಪಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ವಿಘ್ನೇಶ್ ಎಂ. ಭೂತನಕಾಡು, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್, ಜಂಟಿ ಕಾರ್ಯದರ್ಶಿ ನಾಗರಾಜ ಶೆಟ್ಟಿ, ನಿರ್ದೇಶಕ ಎಸ್.ಎಂ. ಮುಬಾರಕ್ ಇದ್ದರು.