ಗೋಣಿಕೊಪ್ಪ ವರದಿ, ಆ. 2 : ಕಾರ್ಮಿಕರನ್ನು ಜೀತ ಪದ್ದತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ದೂರಿನಂತೆ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು.

ಕುಂದ ಗ್ರಾಮದ ಬೆಳೆಗಾರ ಕಡೇಮಾಡ ಉತ್ತಪ್ಪ, ತಾವಳಗೇರಿ ಗ್ರಾಮದ ಮಚ್ಚಮಾಡ ಕುಶ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು. ಎರಡು ಮನೆಗಳಲ್ಲಿ ಯಾವದೇ ಜೀತದಾಳು ಗಳು ಪತ್ತೆಯಾಗಲಿಲ್ಲ.

ಆದಿವಾಸಿ ಸಂಘಟನೆಯೊಂದು ಈ ಮನೆಗಳಲ್ಲಿ ಕಾರ್ಮಿಕರನ್ನು ಜೀತ ಪದ್ಧತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದರಂತೆ ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಕಾರ್ಮಿಕರು ಇಲ್ಲದ ಬಗ್ಗೆ ಬೆಳೆಗಾರರು ಮಾಹಿತಿ ನೀಡಿದರು.

ಈ ಸಂದರ್ಭ ಪೊನ್ನಂಪೇಟೆ ಕಂದಾಯ ನಿರೀಕ್ಷಕ ರಾಧಕೃಷ್ಣ, ಶ್ರೀಮಂಗಲ ಕಂದಾಯ ನಿರೀಕ್ಷಕ ದೇವಯ್ಯ ಉಪಸ್ಥಿತರಿದ್ದರು.