ಮಡಿಕೇರಿ, ಆ. 2: ಐನ್‍ಮನೆಗಳಲ್ಲಿ ಕೊಡವ ಸಂಸ್ಕøತಿಯ ಬೇರು ಅಡಗಿದೆ, ಕೊಡವರ ಬಾಳು - ಬದುಕು ಐನ್‍ಮನೆ ಪಟ್ಟೆದಾರ, ಹಿರಿಯರ ಹಿಡಿತದಲ್ಲಿದ್ದಾಗ ಜನಾಂಗದ ನಡುವೆ ಒಗ್ಗಟ್ಟು - ಒಮ್ಮತವಿತ್ತು. ನಾಗರೀಕತೆ ಬೆಳೆದಂತೆ ಈ ಸಂಸ್ಕøತಿಯನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿರುವದು ಹಲವು ಅವಾಂತರಗಳಿಗೆ ಕಾರಣವಾಗುತ್ತಿದೆ ಎಂಬ ಅಂಶ ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘದ ವತಿಯಿಂದ ನಡೆದ ಮೂರನೆಯ ಐನ್‍ಮನೆ ಜಾಗೃತಿ ಕಾರ್ಯಕ್ರಮದಲ್ಲಿ ಚರ್ಚೆಗೊಳಪಟ್ಟಿತು.
ಸಂಘದ ವತಿಯಿಂದ ಮೂರನೇ ಕಾರ್ಯಕ್ರಮವಾಗಿ ನಿನ್ನೆ ಬೊಳ್ಳರಿಮಾಡು ಗ್ರಾಮದ ಪುಟ್ಟಿಚಂಡ ಐನ್‍ಮನೆಯಲ್ಲಿ ನಡೆದ ಐನ್‍ಮನೆಯಲ್ಲಿ ತಿರಿಬೊಳ್‍ಚ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅವರು ಈ ವಿಚಾರ ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ಐನ್‍ಮನೆ ಸಂಸ್ಕøತಿಯನ್ನು ಪುನಶ್ಚೇತನಗೊಳಿಸಲು ಅಗತ್ಯ ಪ್ರಯತ್ನ ನಡೆಸಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕುಟುಂಬದ ಪಟ್ಟೆದಾರ ಪುಟ್ಟಿಚಂಡ ಕೆ. ಮುತ್ತಪ್ಪ ಅವರು ಮಾತನಾಡಿ, ಪುಟ್ಟಿಚಂಡ ಐನ್‍ಮನೆ ನಿರ್ಮಿಸಿ ಸುಮಾರು 180 ವರ್ಷಗಳಾದವು. ಸುಮಾರು 12 ತಲೆಮಾರುಗಳನ್ನು ಕೂಡಿದ ನಮ್ಮ ಐನ್‍ಮನೆಯನ್ನು ರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲ ಜಾಗೃತರಾಗಿದ್ದೇವೆ ಎಂದರು.
ವೇದಿಕೆಯಲ್ಲಿ ಪುಟ್ಟಿಚಂಡ ಅಯ್ಯಣ್ಣ, ಜೈಕುಮಾರ್, ಬೋಪಣ್ಣ ಅಲ್ಲದೆ ತಿರಿಬೊಳ್‍ಚ ಕೊಡವ ಸಂಘದ ಸಲಹೆಗಾರ ಕುಕ್ಕೆರ ಜಯ ಚಿಣ್ಣಪ್ಪ, ಕಾಳೇಂಗಡ ಮುತ್ತಪ್ಪ ಹಾಜರಿದ್ದರು. ಕಾರ್ಯಕ್ರಮದಲ್ಲಿ ‘ಬಾಕೆ ಬುಟ್ಟಂಡುಳ್ಳ ಬಾಲಂಗ’ (ವಿವಾಹ ವಿಚ್ಛೇದನ ಕುರಿತು) ಹಾಗೂ ‘ಕೊಡವ ಐನ್‍ಮನೆ ಅಂದ್ - ಇಂದ್’ ಎಂಬ ವಿಷಯದ ಬಗ್ಗೆ ಪುಟ್ಟಿಚಂಡ ಡಯಾನ ಸೋಮಯ್ಯ ಹಾಗೂ ಚೆಯ್ಯಂಡ ಸತ್ಯ ಗಣಪತಿ ಅವರು ಪ್ರಬಂಧ ಮಂಡಿಸಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಐನ್‍ಮನೆ ನಶಿಸಿ ಹೋಗದಂತೆ ಎಚ್ಚರ ವಹಿಸುವಂತೆಯೂ, ಯುವಕರಲ್ಲಿ ಹೆಚ್ಚಾಗುತ್ತಿರುವ ವಿಚ್ಛೇದನೆಯನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಸಮಿತಿಯನ್ನು ರಚಿಸುವಂತೆಯೂ ತೀರ್ಮಾನ ಕೈಗೊಳ್ಳಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಹಲವಾರು ಪೈಪೋಟಿಗಳು ಜರುಗಿದವು. ಸಂಘದ ಸಲಹೆಗಾರ ಡಾ. ಉಳ್ಳಿಯಡ ಎಂ. ಪೂವಯ್ಯ ಅವರು ಮಾತನಾಡಿ, ಸೈನಿಕ ಜಿಲ್ಲೆ ಕೊಡಗಿನಲ್ಲಿ ಸೇನಾ ಸಾಧಕರು ಸಾಕಷ್ಟು ಇದ್ದಾರೆ, ಅಂತಹವರ ಸ್ಮರಣೆ ಕಾರ್ಯ ತೃಪ್ತಿದಾಯಕವಾಗಿಲ್ಲ ಎಂದು ವಿಷಾದಿಸಿದರು. ಮಹಾವೀರ ಚಕ್ರ ಪ್ರಶಸ್ತಿ (ಒಗಿಅ) ಪಡೆದಿರುವ ವ್ಯಕ್ತಿ ಇಂದಿಗೂ ಜೀವಂತವಾಗಿರುವ ಇದೇ ಪುಟ್ಟಿಚಂಡ ಐನ್‍ಮನೆಯಲ್ಲಿ ಜನ್ಮವೆತ್ತಿದ ಕರ್ನಲ್ ಪುಟ್ಟಿಚಂಡ ಎಸ್,. ಗಣಪತಿ ಅವರು ಒಂದು ನಿದರ್ಶನವಾಗಿದ್ದಾರೆ. ಅಂತಹ ಸಾಧಕರು ಪರಿಗಣನೆ ಆಗದಿರುವದು ವಿಷಾದಕರ. ಅವರ ಗೌರವಾರ್ಥ ಜನರು ಎಚ್ಚೆತ್ತುಕೊಳ್ಳಬೇಕು ಎಂದರು. ಕಾರ್ಯಕ್ರಮಕ್ಕೆ ಮುನ್ನ ನೆಲ್ಲಕ್ಕಿ ನಡುಬಾಡೆಯಲ್ಲಿ ತಪ್ಪಡ್‍ಕ ಕಟ್ಟಿ ಗುರುಕಾರೋಣರಿಗೆ ಅಕ್ಕಿ ಹಾಕಿ ಚಾಲನೆ ನೀಡಲಾಯಿತು.
ಕಾಳೇಂಗಡ ಸಾವಿತ್ರಿ ಮುತ್ತಪ್ಪ ಸ್ವಾಗತಿಸಿ, ತೆನ್ನಿರ ರಾಧ ಪೊನ್ನಪ್ಪ ಸಂಗಡಿಗರು ಪ್ರಾರ್ಥಿಸಿದರು. ಬೊಟ್ಟೋಳಂಡ ನಿವ್ಯ ದೇವಯ್ಯ ವಂದಿಸಿದರು. ಕೂಪದೀರ ಜೂನಾ ವಿಜಯ್ ಕಾರ್ಯಕ್ರಮ ನಿರೂಪಿಸಿದರು.