ಮಡಿಕೇರಿ, ಆ. 13: ದಿನೇ ದಿನೇ ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತದೊಂದಿಗೆ ವಾಹನಗಳ ಸಂಚಾರಕ್ಕೆ ಗಂಭೀರ ಸಮಸ್ಯೆ ಆಗುತ್ತಿದ್ದು, ಪ್ರಯಾಣಿಕರಿಗೆ ತೊಂದರೆ ತಪ್ಪಿಸುವ ದಿಸೆಯಲ್ಲಿ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಮಡಿಕೇರಿ - ಗಾಳಿಬೀಡು ಮುಖಾಂತರ ಕಡಮಕಲ್‍ಗಾಗಿ ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮುಂದಾಗುವಂತೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಪಡಿಸಿದ್ದಾರೆ.ಮದೆನಾಡುವಿನ ಕರ್ತೋಜಿ ಎಂಬಲ್ಲಿ ಭಾರೀ ಭೂ ಕುಸಿತದಿಂದ ಮೈಸೂರು - ಬಂಟ್ವಾಳ ಹೆದ್ದಾರಿ ಸಂಪೂರ್ಣ (ಮೊದಲ ಪುಟದಿಂದ) ಬಂದ್ ಆಗಿರುವ ಬಗ್ಗೆ ಉಲ್ಲೇಖಿಸಿದ ಅವರು, ಸದ್ಯದ ಪರಿಸ್ಥಿತಿ ಕುರಿತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ನೀಡಿದರು. ಹೆದ್ದಾರಿಯ ಭೂಕುಸಿತ ವೀಕ್ಷಣೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಕೆಜಿಬಿ, ಪ್ರಸಕ್ತ ಸಾಲಿನ ಮುಂಗಾರು ಮಳೆಯ ತೀವ್ರತೆ ಬಗ್ಗೆ ತಾವು ಪದೇ ಪದೇ ಜಿಲ್ಲಾಡಳಿತದ ಗಮನ ಸೆಳೆದಿರುವದಾಗಿ ನೆನಪಿಸಿದರು.

ಭವಿಷ್ಯದ ಸುರಕ್ಷತೆಗಾಗಿ ಮಡಿಕೇರಿಯಿಂದ ಗಾಳಿಬೀಡು ಮುಖಾಂತರ ಕೇವಲ ಆರೆಂಟು ಕಿ.ಮೀ. ದೂರ ಬಾಕಿಯಾಗಿರುವ ರಸ್ತೆ ಕೆಲಸ ಕೈಗೊಂಡರೆ ಕೊಡಗು ಸೇರಿದಂತೆ ರಾಜ್ಯದ ಜನತೆಗೂ ಉಪಕಾರವಾಗಲಿದೆ ಎಂದು ಉಲ್ಲೇಖಿಸಿದ ಅವರು, ಮೇಲಿಂದ ಮೇಲೆ ಅನಾಹುತ ತಡೆಗಟ್ಟಲು ಅದೊಂದೇ ಪರ್ಯಾಯ ಮಾರ್ಗವೆಂದು ಪ್ರತಿಪಾದಿಸಿದರು.

ಜಿಲ್ಲಾಡಳಿತದಿಂದ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ, ತಾವು ಈಚೆಗೆ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರ ಸಮ್ಮುಖ ನಡೆದ ಸಭೆಯಲ್ಲೇ ಪ್ರಸ್ತಾಪಿಸಿದ್ದಾಗಿ ನುಡಿದ ಅವರು, ಜಿಲ್ಲಾಡಳಿತ ಕ್ರಮ ವಹಿಸಿದರೆ, ಜಿಲ್ಲೆಯ ಶಾಸಕರು ಸರಕಾರದೊಂದಿಗೆ ರಸ್ತೆ ಅಭಿವೃದ್ಧಿಗೆ ಗಮನ ಹರಿಸುವದಾಗಿ ಪುನರುಚ್ಚರಿಸಿದರು.