ಮಡಿಕೇರಿ, ಆ. 13: ಕೊಡಗು ಜಿಲ್ಲೆಯಲ್ಲಿ ಈ ತಲೆಮಾರಿನ ಬಹುಮಂದಿ ಕಂಡು ಕೇಳರಿಯದಷ್ಟು ಮಟ್ಟಿಗೆ ಪ್ರಸಕ್ತ ವರ್ಷಾರಂಭದಿಂದ ಮುಂಗಾರು ಮಳೆಯು ಹೊಡೆತ ನೀಡಿರುವ ಪರಿಣಾಮ, ಕೊಡಗು ಜಿಲ್ಲೆಗೆ ಮೇಲಿಂದ ಮೇಲೆ ಪ್ರಾಕೃತಿಕ ಗಂಡಾಂತರ ಎದುರಾಗಿದೆ. ಕಳೆದ ಜೂನ್ ಎರಡನೇ ವಾರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ, ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಮಹಾಮುನಿ ಬೆಟ್ಟ ಜಿಲ್ಲೆಯ ಗಡಿಯಂಚಿನಲ್ಲಿ ಕುಸಿಯಿತು. ಪರಿಣಾಮವೆಂಬಂತೆ ಅಂದು ರಾತ್ರಿ ಕೊಡಗು - ಕೇರಳ ಹೆದ್ದಾರಿಯಲ್ಲಿ ಸಂಪರ್ಕ ಕಲ್ಪಿಸುವ ಮಾಕುಟ್ಟ- ಕೂಟುಹೊಳೆ ನಡುವೆ ಹತ್ತಾರು ಕಡೆ ಹೆದ್ದಾರಿ ಸಹಿತ ಭಾರೀ ಭೂಕುಸಿತ ಉಂಟಾಯಿತು. ಮಾತ್ರವಲ್ಲದೆ, 50ಕ್ಕೂ ಅಧಿಕ ಕಡೆ ರಸ್ತೆಗೆ ಮರಗಳ ಸಹಿತ ಬರೆ ಜರಿದು ತಿಂಗಳುಗಟ್ಟಲೆ ಸಂಪರ್ಕ ಸ್ಥಗಿತವಾಯಿತು.ಇನ್ನೇನು ಮಾಕುಟ್ಟ ಹೆದ್ದಾರಿ ಸಂಪರ್ಕ ತಾತ್ಕಾಲಿಕ ದುರಸ್ಥಿಗೊಂಡು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುವಷ್ಟರಲ್ಲಿ, ಮಡಿಕೇರಿ ಸಮೀಪದ ಗಾಳಿಬೀಡು- ಕಾಲೂರು ರಸ್ತೆಯಲ್ಲಿ ಭೂಕುಸಿತ ಎದುರಾಯಿತು. ಹೆದ್ದಾರಿ ಪ್ರಾಧಿಕಾರ ಸಹಿತ ಪಂಚಾಯತ್‍ರಾಜ್ ಅಧಿಕಾರಿಗಳು ಮಣ್ಣು ತೆರವುಗೊಳಿಸಿ ವಾಹನಗಳ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾದರು.

ಅಷ್ಟರಲ್ಲಿ ಮಡಿಕೇರಿ- ಮಂಗಳೂರು ಮಾರ್ಗದ ಕಾಟಕೇರಿಯಲ್ಲಿ (ಮೊದಲ ಪುಟದಿಂದ) ಮತ್ತೆ ಹೆದ್ದಾರಿಯಲ್ಲಿ ಕುಸಿತದಿಂದ ಅನಾಹುತ ಎದುರಿಸುವಂತಾಯಿತು. ಇನ್ನೇನು ಅಲ್ಲಿ ಕುದಿಸಿರುವ ಹೆದ್ದಾರಿಗೆ ಮಣ್ಣು ತುಂಬಿ ಸಂಬಂಧಪಟ್ಟವರು ದುರಸ್ಥಿ ಮಾಡಿಸುವಷ್ಟರಲ್ಲಿ ಗಾಳಿಬೀಡು- ಕಾಲೂರು ಮಾರ್ಗದ ಹತ್ತಾರು ಕಡೆ ಭೂಕುಸಿತದಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಈ ನಡುವೆ ಹಟ್ಟಿಹೊಳೆ- ಹಚ್ಚಿನಾಡು ಹೆದ್ದಾರಿ ಹಾಗೂ ಗರ್ವಾಲೆ- ಸೂರ್ಲಬ್ಬಿ ನಡುವೆ ಭೂಕುಸಿತದಿಂದ ಸಾರ್ವಜನಿಕ ಸಂಪರ್ಕ ವಾರಗಟ್ಟಲೆ ಕಡಿತ ಗೊಂಡಿತು. ಆ ಹೊತ್ತಿಗೆ ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲೇ ಮತ್ತೆ ಮಂಗಳೂರು ಹೆದ್ದಾರಿಯಲ್ಲಿ ಬೃಹತ್ ಗುಂಡಿ ಉಂಟಾಗಿ, ಅದನ್ನು ಸರಿಪಡಿ ಸುವಷ್ಟರಲ್ಲಿ, ಅನತಿ ದೂರದಲ್ಲಿ 20 ದಿನಗಳ ಹಿಂದೆ ಭೂಕುಸಿತದಿಂದ ಅಪಾಯ ಎದುರಾಯಿತು.

ಕೇವಲ ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತುರ್ತು ರಿಪೇರಿಗೆ ಮುಂದಾಗಿರುವ ಬೆನ್ನಲ್ಲೇ ಇಂದು ಮತ್ತೆ ಬೆಟ್ಟ ಸಹಿತ ಮದೆನಾಡಿನಲ್ಲಿ ಭೂ ಕುಸಿದು ಸಾಕಷ್ಟು ಅವಾಂತರ ಸೃಷ್ಟಿಸಿದೆ.

ಒಂದೆಡೆ ಗಾಳಿ-ಮಳೆಯ ತೀವ್ರತೆಯಿಂದ ಜಿಲ್ಲೆಯ ಜನತೆ ಮನೆ, ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಕಂಗಾಲಾಗಿರುವ ಸಂದರ್ಭ, ಪದೇ ಪದೇ ಹೆದ್ದಾರಿ ಕುಸಿತದಿಂದ ಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡು ಬದುಕು ಜರ್ಝರಿತವೆನಿಸತೊಡಗಿದೆ.

ಇನ್ನೊಂದೆಡೆ ಮಡಿಕೇರಿಯಿಂದ ಆರೆಂಟು ಕಿ.ಮೀ. ದೂರದ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಅಲ್ಲಲ್ಲಿ ಭೂಮಿಯ ನಡುವೆ ಬಿರುಕು ಕಾಣಿಸಿಕೊಂಡು ಸಾಕಷ್ಟು ಆತಂಕ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ಬೆನ್ನಲ್ಲೇ ಜಿಲ್ಲೆಯಲ್ಲಿ ಮಳೆಯ ತೀವ್ರತೆ ನಡುವೆ ಭೂಮಿ ಕಂಪಿಸಿದ ಅನುಭವವೂ ಜನತೆಗಾಗಿ ಜೀವಭಯದ ವಾತಾವರಣ ಎದುರಾಗಿತ್ತು.

ರೈತರ ಅಳಲು: ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟ ಶ್ರೇಣಿಯ ಕುಗ್ರಾಮಗಳಾದ ಹಮ್ಮಿಯಾಲ, ಹಚ್ಚಿನಾಡು, ಮುಟ್ಲು ವ್ಯಾಪ್ತಿಯಲ್ಲಿ 276 ಇಂಚು ಮಳೆಯಾಗಿದ್ದು, ಕಳೆದ 48 ಗಂಟೆಗಳಲ್ಲಿ ಸರಾಸರಿ 15 ಇಂಚು ಮಳೆಯಾಗಿ ಬದುಕು ಅಸಾಧ್ಯ ಪರಿಸ್ಥಿತಿ ಉಂಟಾಗಿದೆ ಎಂದು ಅಲ್ಲಿನ ರೈತ ಪುದಿಯತ್ತಂಡ ರವಿ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಗದ್ದೆಗಳು ಸಂಪೂರ್ಣ ನಾಟಿ ನಾಶಗೊಂಡು ಜಲದಿಂದ ಸಮುದ್ರದಂತೆ ಭಾಸವಾಗುತ್ತಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಮಂಕ್ಯ ನಿವಾಸಿ ಚಾಮೇರ ದಿನೇಶ್, ಕಳೆದ 4 ದಿನಗಳಿಂದ ಸರಾಸರಿ ಪ್ರತಿದಿನ 10 ಇಂಚು ಮಳೆಯಾಗಿದ್ದು, ಇದುವರೆಗೆ 295 ಇಂಚು ಮಳೆ ಸುರಿದಿದೆ ಎಂದು ವಿವರಿಸಿದ್ದಾರೆ. ಸೂರ್ಲಬ್ಬಿ ನಾಡಿನಲ್ಲಿ ಯಾವದೇ ಕೃಷಿ ಫಸಲು ಉಳಿದಿಲ್ಲವೆಂದು ಅಸಹಾಯಕರಾಗಿ ನುಡಿದಿರುವ ಅವರು, 70 ವರ್ಷ ಹಿಂದೆ ನಾಡಿಗೆ ಇಂತಹ ಮಳೆಯಾಗಿರುವ ಬಗ್ಗೆ ಹಿರಿಯರು ಕೇಳಿದ್ದರಂತೆ ಎಂದು ಪರಿಸ್ಥಿತಿಯ ತೀವ್ರತೆಯನ್ನು ವಿವರಿಸಿದ್ದಾರೆ.