ಸೋಮವಾರಪೇಟೆ, ಆ. 13: ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸೂರ್ಲಬ್ಬಿಗೆ ಇದುವರೆಗೆ ದಾಖಲೆಯ 281 ಇಂಚು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 13 ಇಂಚು ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.ಸೂರ್ಲಬ್ಬಿ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ 295 ಇಂಚು ಸುರಿದಿದೆ. ಸೂರ್ಲಬ್ಬಿ ಗ್ರಾಮದಲ್ಲಿರುವ ಮಳೆಮಾಪನದಲ್ಲಿ 281 ಇಂಚು ಮಳೆ ದಾಖಲಾಗಿದೆ ಎಂದು ನಾಣಿಯಪ್ಪ ಅವರು ತಿಳಿಸಿದ್ದಾರೆ.ಈ ಭಾಗಕ್ಕೆ ಕಳೆದ ನಾಲ್ಕು ದಿನಗಳಲ್ಲಿ ಬರೋಬ್ಬರಿ 40 ಇಂಚು ಮಳೆ ಸುರಿದಿದೆ. ಕಳೆದ ವರ್ಷ ಇಲ್ಲಿಯವರೆಗೆ 130 ಇಂಚು ಸುರಿದಿದ್ದ ಮಳೆ, ಪ್ರಸಕ್ತ ಸಾಲಿನಲ್ಲಿ ದುಪ್ಪಟ್ಟಿಗಿಂತಲೂ ಅಧಿಕ ವರ್ಷಾಧಾರೆಯಾಗಿದೆ. ಭಾರೀ ಮಳೆಗೆ ಗ್ರಾಮವಾಸಿಗಳು ತತ್ತರಿಸಿದ್ದು, ಐದಾರು ದಶಕದ ಹಿಂದಿನ ಜನಜೀವನವನ್ನು ಹಿರಿಯರು ಮೆಲುಕು ಹಾಕುವಂತಾಗಿದೆ. ಜಾನುವಾರುಗಳನ್ನು ಹೊರಗೆ ಬಿಡಲಾರದಷ್ಟು ವಾತಾವರಣ ಶೀತಗೊಂಡಿದ್ದು, ಕೃಷಿ ಬೆಳೆಗಳು ನೀರುಪಾಲಾಗಿವೆ. ಅಲ್ಲಲ್ಲಿ ರಸ್ತೆ ದುಸ್ಥಿತಿಗೆ ತಲಪಿದ್ದು, ಬರೆ ಕುಸಿತದಿಂದ ಸಂಪರ್ಕ ಸಾಧಿಸಲು ಅಸಾಧ್ಯವಾಗಿದೆ. ದೂರವಾಣಿ, ವಿದ್ಯುತ್ ಸಂಪರ್ಕವೂ ಸ್ಥಗಿತಗೊಂಡಿದ್ದು, ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಾಗಿದೆ ಎಂದು ಮಂಕ್ಯ ಗ್ರಾಮದ ಚಾಮೇರ ದಿನೇಶ್ ಅಭಿಪ್ರಾಯಿಸಿದ್ದಾರೆ.

ಹರಗ ಗ್ರಾಮಕ್ಕೆ ಇದುವರೆಗೆ 208 ಇಂಚು ಮಳೆಯಾಗಿದೆ. ತಲ್ತರೆಶೆಟ್ಟಳ್ಳಿಗೆ 140 ಇಂಚು,

(ಮೊದಲ ಪುಟದಿಂದ) ಸೋಮವಾರಪೇಟೆ ಪಟ್ಟಣ ಸುತ್ತಮುತ್ತ 108 ಇಂಚು ಮಳೆಯಾಗಿದೆ. ಕುಡಿಗಾಣ ಭಾಗದಲ್ಲಿ 300 ಇಂಚಿನ ಆಸುಪಾಸಿಗೆ ಮಳೆ ತಲಪಿದ್ದು, ಕಾಫಿ ಫಸಲು ಈಗಾಗಲೇ ಶೇ. 70ರಷ್ಟು ನೆಲಕ್ಕಚ್ಚಿದೆ. ತಲ್ತರೆ ಭಾಗದಲ್ಲಿ ಶೇ. 50ರಷ್ಟು ಕಾಫಿ ಉದುರಿದೆ ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ತಿಳಿಸಿದ್ದಾರೆ.

ಬಜೆಗುಂಡಿಯಲ್ಲಿ ಮನೆಗೆ ಹಾನಿ: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿಯಲ್ಲಿ ಬಲ್ಲೇದಿ ಸೋಮ ಎಂಬವರ ಮನೆಯ ಗೋಡೆ ಅತೀ ಶೀತಕ್ಕೆ ಕುಸಿದು ಬಿದ್ದಿದೆ. ಇವರ ಮನೆಗೆ ಒತ್ತಿಕೊಂಡಂತೆ ಇರುವ ರಾಜು ಎಂಬವರ ಮನೆಯ ಮೇಲೆ ಗೋಡೆ ಕುಸಿದು ಬಿದ್ದಿದ್ದರಿಂದ ಹೆಂಚು, ಸಿಮೆಂಟ್ ಶೀಟ್, ಮರಮುಟ್ಟುಗಳು ಹಾನಿಗೀಡಾಗಿವೆ.

ಇದರೊಂದಿಗೆ ಬಜೆಗುಂಡಿ ಗ್ರಾಮದ ಮಲ್ಲಮ್ಮ ಎಂಬವರಿಗೆ ಸೇರಿದ ಶೌಚಾಲಯದ ಗೋಡೆ ಕುಸಿದುಬಿದ್ದಿದೆ. ಅಬೂಬಕರ್ ಎಂಬವರ ಮನೆ ಸಮೀಪ ರಸ್ತೆ ಬದಿ ಕುಸಿತಗೊಂಡಿದ್ದು, ಕಾಂಕ್ರೀಟ್ ರಸ್ತೆಗೆ ಅಪಾಯ ತಂದೊಡ್ಡಿದೆ. ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಸದಸ್ಯರಾದ ಕೆ.ಎ. ಯಾಕೂಬ್, ಕವಿತ, ವೀಣಾ, ಗ್ರಾಮ ಲೆಕ್ಕಾಧಿಕಾರಿ ಮೋಹನ್ ಅವರುಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಭಾರೀ ಮಳೆಯಾಗುತ್ತಿರುವದರಿಂದ ಮನೆಗಳು ಸಂಪೂರ್ಣ ಕುಸಿತಗೊಳ್ಳುತ್ತಿದ್ದು, ಸರ್ಕಾರದಿಂದ ಗರಿಷ್ಠವೆಂದರೂ ಕೇವಲ 95 ಸಾವಿರ ಮಾತ್ರ ಪರಿಹಾರ ನೀಡಲಾಗುತ್ತಿದೆ. ಇದನ್ನು ಬದಲಾಯಿಸಿ ಗರಿಷ್ಠ 4 ಲಕ್ಷ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕು ಎಂದು ಕೆ.ಎ. ಯಾಕೂಬ್ ಒತ್ತಾಯಿಸಿದ್ದಾರೆ.

ಮನೆಗೆ ಉರುಳಿದ ಬಂಡೆ: ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ಇಂದು ಮಧ್ಯಾಹ್ನ 2.30ರ ಸುಮಾರಿಗೆ ಬೃಹತ್ ಗಾತ್ರದ ಬಂಡೆಯೊಂದು ವಾಸದ ಮನೆಗೆ ಉರುಳಿದ ಪರಿಣಾಮ, ಎರಡು ಮನೆಗಳು ಜಖಂಗೊಂಡಿವೆ.

ಮಹದೇಶ್ವರ ಬಡಾವಣೆಯ ಸರೋಜ ವೇಲುಸ್ವಾಮಿ ಎಂಬವರ ಮನೆಯ ಹಿಂಭಾಗದ ಬರೆ ಕುಸಿತಗೊಂಡಿದ್ದು, ಬೃಹತ್ ಗಾತ್ರದ ಕಲ್ಲು ಬಂಡೆ ಮನೆಯ ಗೋಡೆಗೆ ಅಪ್ಪಳಿಸಿದೆ. ಪರಿಣಾಮ ಹಿಂಬದಿಯ ಗೋಡೆ ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ಭ ಮನೆಯೊಳಗೆ ಸರಸು ಎಂಬವರು ಮಲಗಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ. ಇದರೊಂದಿಗೆ ಪಕ್ಕದಲ್ಲಿರುವ ಕದ್ರ ಎಂಬವರ ಮನೆಯ ಗೋಡೆಗೂ ಕಲ್ಲುಬಂಡೆ ಅಪ್ಪಳಿಸಿದ್ದು, ಮನೆ ಭಾಗಶಃ ಜಖಂಗೊಂಡಿದೆ. ಅಣ್ಣಪ್ಪ ಅವರ ಮನೆಯ ಹಿಂಭಾಗ ಬರೆ ಕುಸಿದು ವಾಸದ ಮನೆಗೆ ಹಾನಿಯಾಗಿದೆ.

ಆಲೂರುಸಿದ್ದಾಪುರ: ಶನಿವಾರಸಂತೆ ಕೊಡ್ಲಿಪೇಟೆ ಸೇರಿದಂತೆ ಸುತ್ತಮುತ್ತ ನಿನ್ನೆ ಹಾಗೂ ಇಂದು ಬಾರಿ ಮಳೆ ಗಾಳಿಯಿಂದ ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು ಇದರಿಂದ ಅನೇಕ ಗ್ರಾಮಗಳು ಕತ್ತಲೆಯಲ್ಲಿ ದಿನತಳ್ಳುತ್ತಿವೆ.

ಮಳ್ಳೂರು ಇಂಟಿನಾಯಕನ ಕೆರೆ ಇಂದು ಮತ್ತೆ ಸಂಪೂರ್ಣ ಭರ್ತಿಯಾಗಿದ್ದು, ಶನಿವಾರಸಂತೆ ಕುಶಾಲನಗರ ಮುಖ್ಯ ರಸ್ತೆಯ ತಿರುವು ರಸ್ತೆಗೆ ಹೊಂದಿಕೊಂಡಂತೆ ಅಪಾಯಕ್ಕೆ ಆಹ್ವಾನಿಸುವಂತಿದೆ.

ಶನಿವಾರಸಂತೆ ಕುಶಾಲನಗರ ಮುಖ್ಯ ರಸ್ತೆಯ ಆಲೂರುಸಿದ್ದಾಪೂರ, ಗೋಪಾಲಪುರ ಸೇರಿದಂತೆ ಅಲ್ಲಲ್ಲಿ ರಸ್ತೆಯ ಒಳ ಚರಂಡಿಗಳು ಮುಚ್ಚಿರುವದರಿಂದ ಮುಖ್ಯ ರಸ್ತೆಯಲ್ಲೇ ಮಳೆ ನೀರೆಲ್ಲ ಹರಿಯುತ್ತಿದೆ. ಇದರಿಂದ ಗುಂಡಿ ಇರುವ ರಸ್ತೆಗಳು ಕೆರೆಯಂತಾಗಿವೆ.

ಕಣಿವೆ ಬಸವನಹಳ್ಳಿ ಗ್ರಾಮದ ರೋಹಿಣಿಯವರ ಮನೆಯ ಒಳ ಭಾಗದಲ್ಲೇ ನೀರಿನ ಜಲಬರುತ್ತಿದ್ದು ನೀರನ್ನು ಹೊರಹಾಕಲು ಮನೆಯವರೆಲ್ಲರು ಹರಸಹಾಸ ಪಡುವಂತಾಗಿದೆ.

ಸಿದ್ದಾಪುರ: ಎಡೆಬಿಡದೆ ಸುರಿದ ಗಾಳಿ ಮಳೆಗೆ ರಸ್ತೆ ಬದಿಯ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಮೀಪದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಹಾನಿಗೊಳಗಾಗಿದ್ದು ಕೆಲಕಾಲ ಸಂಚಾರ ಸ್ಥಗಿತಗೊಂಡ ಘಟನೆ ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿ ನಡೆದಿದೆ. ಘಟನೆಯನ್ನರಿತ ಸ್ಥಳೀಯ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿಗಳನ್ನು ಸರಿಪಡಿಸಿ, ಸ್ಥಳೀಯರ ಸಹಕಾರದೊಂದಿಗೆ ಮರವನ್ನು ಕಡಿದು ತೆರವುಗೊಳಿಸಿದರು.

ಹಾರಂಗಿಯಿಂದ ನದಿಗೆ ನೀರು

ಕುಶಾಲನಗರ: ಹಾರಂಗಿ ಜಲಾಶಯಕ್ಕೆ ಒಳಹರಿವು ಪ್ರಮಾಣ ಏರಿಕೆಗೊಂಡಿದ್ದು ಸೋಮವಾರ ಸಂಜೆ 6 ಗಂಟೆ ವೇಳೆಗೆ 24127 ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನದಿಗೆ 19 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿಸಲಾಗುತ್ತಿದೆ. ಕಾಲುವೆ ಮೂಲಕ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಜಲಾಶಯದಲ್ಲಿ 7.85 ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಇದ್ದು ಅಣೆಕಟ್ಟಿನ ನೀರಿನ ಮಟ್ಟ 2857.10 ಅಡಿಗಳಾಗಿವೆ. ಇದುವರೆಗೆ ಈ ಸಾಲಿನಲ್ಲಿ ಒಟ್ಟು 41.26 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು ನದಿಗೆ 30.37 ಟಿಎಂಸಿ ನೀರು ಹರಿಸಲಾಗಿದೆ. ಕಾಲುವೆ ಮೂಲಕ 2.42 ಟಿಎಂಸಿ ಪ್ರಮಾಣದ ನೀರು ಹರಿದಿದೆ ಎಂದು ಹಾರಂಗಿ ಅಣೆಕಟ್ಟೆ ವಿಭಾಗದ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ಸೋಮವಾರಪೇಟೆ: ಭಾರೀ ಮಳೆಗೆ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮ ತತ್ತರಿಸಿದೆ. ದೊಡ್ಡಳ್ಳಿ ಕೆರೆ ತುಂಬಿ ಹರಿಯುತ್ತಿದ್ದು, ನಾಲೆಗಳಿಂದ ಗದ್ದೆಗೆ ನೀರು ನುಗ್ಗಿದೆ.

ನಾಟಿ ಕಾರ್ಯ ಮಾಡಿದ್ದ ಗದ್ದೆಗಳಲ್ಲಿ ಹೊಳೆಯಂತೆ ನೀರು ಹರಿಯುತ್ತಿದ್ದು, ಪೈರಿಗೆ ಹಾನಿಯಾಗಿದೆ. ದೊಡ್ಡಳ್ಳಿ ಕೆರೆ ಕೋಡಿ ಹರಿದ ಪರಿಣಾಮ ನಾಲೆಯಲ್ಲಿ ನೀರಿನ ಹರಿವು ಅಧಿಕಗೊಂಡು ಅಕ್ಕಪಕ್ಕದ ಗದ್ದೆಗಳಿಗೆ ನುಗ್ಗಿದೆ.

ದೊಡ್ಡಳ್ಳಿ ಗ್ರಾಮದ ಪಟ್ಟಡ ಕಾರ್ಯಪ್ಪ, ಬೈಮನ ತಿಮ್ಮಯ್ಯ, ಕುಂಞಣ್ಣ, ಚನ್ನಪ್ಪ, ಸ್ವಾಮಿ ಸೇರಿದಂತೆ ಇತರರ ಗದ್ದೆಗಳಿಗೆ ನೀರು ನುಗ್ಗಿ ನಾಟಿ ಮಾಡಿದ್ದ ಪೈರು ಹಾನಿಯಾಗಿದೆ.

ನಿನ್ನೆ ಸುರಿದ ಭಾರೀ ಮಳೆಗೆ ಬೈಮನ ತಿಮ್ಮಯ್ಯ ಅವರಿಗೆ ಸೇರಿದ ಮನೆಯ ಹಿಂಭಾಗ ಕುಸಿತಗೊಂಡಿದ್ದು, ಅಡುಗೆ ಕೋಣೆ ಸಂಪೂರ್ಣ ನೆಲಕ್ಕಚ್ಚಿದೆ. ಇದರೊಂದಿಗೆ ವಾಸದ ಮನೆಯ ಸಿಮೆಂಟ್ ಶೀಟ್‍ಗಳೂ ಜಖಂಗೊಂಡಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

ಸುಂಟಿಕೊಪ್ಪ: ಕಂಬಿಬಾಣೆ ವ್ಯಾಪ್ತಿಯ ಉಪ್ಪುತೋಡು ಗ್ರಾಮದಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಸುತ್ತ ಮುತ್ತಲಿನ 3 ಮನೆಗಳಿಗೆ ನುಗ್ಗಿದ ಪರಿಣಾಮ ಮನೆಗಳು ಜಲಾವೃತ್ತಗೊಂಡಿದ್ದರಿಂದ ಮನೆಯ ಗೃಹಬಳಕೆ ವಸ್ತುಗಳು ಹಾನಿಗೊಳ್ಳಗಾಗಿರುವ ಬಗ್ಗೆ ವರದಿಯಾಗಿದೆ.

ಕಂಬಿಬಾಣೆ ವ್ಯಾಪ್ತಿಯ ಉಪ್ಪುತೋಡು ಗ್ರಾಮದ ಪರಮೇಶ್ವರ, ನಾರಾಯಣ, ಕೃಷ್ಣ ಎಂಬವರ ವಾಸದ ಮನೆಗಳಿಗೆ ಸಮೀಪದ ತೋಡು ನೀರು ನುಗ್ಗಿದ್ದು ಮನೆ ಮಂದಿಯೆಲ್ಲಾ ಜೀವ ಭಯದಿಂದ ರಾತ್ರಿಯೆಲ್ಲಾ ಜಾಗರಣೆ ಕೂರಬೇಕಾಯಿತು. ಮನೆಯ ಗೋಡೆ ಸೇರಿದಂತೆ ಗೃಹಪಯೋಗಿ ವಸ್ತುಗಳು ತೋಡು ನೀರಿನ ರಭಸಕ್ಕೆ ಸಿಲುಕಿ ಲಕ್ಷಾಂತರ ರೂ ನಷ್ಟಗೊಂಡಿದೆ ಪರಮೇಶ್ವರ, ನಾರಾಯಣ ಹಾಗೂ ಕೃಷ್ಣ ಅವರುಗಳು ಕಂದಾಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕೂಡಿಗೆ: ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹಾರಂಗಿ ಅಣೆಕಟ್ಟೆಯಿಂದ ಇದುವರೆಗೂ ಬಿಡಲಾಗದಷ್ಟು ನೀರನ್ನು ಹೊರಹರಿಸಿರುವದರಿಂದ, ಕಾವೇರಿ ನದಿಯು ಉಕ್ಕಿ ಹರಿಯುತ್ತಿದೆ.

ಕಾವೇರಿ ಮತ್ತು ಹಾರಂಗಿ ಸಂಗಮವಾಗುವ ಕೂಡಿಗೆಯಿಂದ ಮುಂದೆ ಹರಿಯುವ ನೀರಿನ ಒತ್ತಡ ಹೆಚ್ಚಾಗಿ ಕೂಡಿಗೆ ಕಣಿವೆ ಮಧ್ಯೆ ರಾಜ್ಯ ಹೆದ್ದಾರಿಗೆ ತಲಪುವಷ್ಟು ನೀರು ಗದ್ದೆಗಳಿಗೆ ನುಗ್ಗಿದೆ. ಅಲ್ಲದೇ ಹೆಬ್ಬಾಲೆ ಸಮೀಪ ಭಾರೀ ನೀರು ನುಗ್ಗಿದ ಪರಿಣಾಮ ಹತ್ತು ಎಕರೆ ಭತ್ತದ ನಾಟಿ ನೀರಿನಲ್ಲಿ ಮುಳುಗಿದೆ. ಅಳಿದುಳಿದ ಮೆಕ್ಕೆ ಜೋಳವೂ ನೀರಿನಲ್ಲಿ ಮುಳುಗಿದೆ.

ನದಿನೀರಿನ ಹೆಚ್ಚಳದಿಂದಾಗಿ ತಗ್ಗು ಪ್ರದೇಶಗಳಾದ ಶಿರಂಗಾಲದ ಕೆಲವು ಗದ್ದೆಗಳು ಕೂಡಮಂಗಳೂರು ದೊಡ್ಡಮ್ಮತಾಯಿ ದೇವಸ್ಥಾನದ ಕೆಳಭಾಗದ ಗದ್ದೆಗಳಿಗೂ ನದಿಯ ನೀರು ತಲಪಿ ಜಲಾವೃತಗೊಂಡಿದೆ.

ಹಾರಂಗಿ ಅಣೆಕಟ್ಟೆಯಿಂದ ನೀರಿನ ಹೆಚ್ವಳವಾಗಿರುವದರಿಂದ ಹುದಗೂರು ಸಸ್ಯ ಕ್ಷೇತ್ರಕ್ಕೆ ತೆರಳುವ ಸೇತುವೆಯು ನೀರಿನಿಂದ ಮುಳುಗಡೆಗೊಂಡಿಗೆ. ಈ ಸಾಲಿನಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಅವಲಂಭಿಸಿದ ರೈತರ ಸ್ಥಿತಿ ಚಿಂತಾಜನಕವಾಗಿದೆ.

ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ವ್ಯಾಪ್ತಿಯ ಐತಿಹಾಸಿಕ ರೊಂಡೇಕೆರೆಯು ವಿಪರೀತ ಮಳೆಯಿಂದ ಭರ್ತಿಯಾಗಿರುವದು ವಿಶೇಷವಾಗಿದ್ದು, ಗೊಂದಿಬಸಬವನಹಳ್ಳಿ ಹಾಗೂ ಕುಶಾಲನಗರಕ್ಕೆ ತೆರಳುವ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಸ್ಥಳಕ್ಕೆ ಮುಳ್ಳುಸೋಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್.ರಾಜಶೇಖರ್ ಹಾಗೂ ಸ್ಥಳೀಯ ಗ್ರಾ.ಪಂ ಸದಸ್ಯರುಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದಾರೆ.