ಸೋಮವಾರಪೇಟೆ,ಆ.13: 2016-17ನೇ ಸಾಲಿನ ಕೊಡಗು ಪ್ಯಾಕೇಜ್‍ನಲ್ಲಿ ಸೋಮವಾರಪೇಟೆ ತಾಲೂಕು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಘೋಷಿಸಲ್ಪಟ್ಟ ಅನುದಾನವನ್ನು ಬಿಡುಗಡೆಗೊಳಿಸು ವಂತೆ ಆಗ್ರಹಿಸಿ, ಗುತ್ತಿಗೆದಾರರು ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಧರಣಿ ನಡೆಸಿದರು.

ಭಾರೀ ಮಳೆಯ ನಡುವೆಯೂ ಟಾರ್ಪಲ್ ಅಳವಡಿಸಿಕೊಂಡು ಧರಣಿ ನಡೆಸಿದ ಗುತ್ತಿಗೆದಾರರು, ಇಲಾಖೆಯ ಸೂಪರಿಂಡೆಂಟ್ ಇಂಜಿನಿಯರ್ ಸ್ಥಳಕ್ಕೆ ಆಗಮಿಸುವವರೆಗೂ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವದು ಎಂದು ಘೋಷಿಸಿದರು.ಕಳೆದ 2016-17ನೇ ಸಾಲಿನಲ್ಲಿ ಸೋಮವಾರಪೇಟೆ ಲೋಕೋಪ ಯೋಗಿ ಇಲಾಖಾ ವ್ಯಾಪ್ತಿಗೆ 16 ಕೋಟಿ ಹಣ ಘೋಷಣೆಯಾಗಿದ್ದು, ಇದರಲ್ಲಿ 52 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಈವರೆಗೆ ಕೇವಲ 3 ಕೋಟಿ ಹಣ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ 13 ಕೋಟಿ ಹಣ ಬಿಡುಗಡೆಗೆ ಬಾಕಿ ಉಳಿದಿದೆ. ಈ ಬಗ್ಗೆ ಇಲಾಖಾಧಿಕಾರಿ ಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಣ್ಣೇಗೌಡ ಆರೋಪಿಸಿದರು.ವಿಶೇಷ ಪ್ಯಾಕೇಜ್‍ನಡಿ ಟೆಂಡರ್ ಪಡೆದಿರುವ ಎಲ್ಲಾ ಕಾಮಗಾರಿಗಳನ್ನು ಪೂರೈಸಲಾಗಿದೆ. (ಮೊದಲ ಪುಟದಿಂದ) ಆದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಕಳೆದ 10 ದಿನಗಳ ಹಿಂದೆಯೇ ಲೋಕೋಪಯೋಗಿ ಇಲಾಖೆಯ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ದಾಖಲಿಸಿದ್ದೇವೆ. ಆದರೂ ಸಹ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರ್ಕಾರ ಗಮನ ಹರಿಸಿಲ್ಲ ಎಂದು ದೂರಿದರು.

ಪ್ರಸಕ್ತ ಬೀಳುತ್ತಿರುವ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಅಲ್ಲಲ್ಲಿ ರಸ್ತೆಗಳು ಸಂಚಾರಕ್ಕೆ ಅಯೋಗ್ಯ ವಾಗಿವೆ. ಚರಂಡಿ ಕಾಮಗಾರಿಗೂ ಸ್ಥಗಿತಗೊಂಡಿವೆ. ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಎಲ್ಲೆಡೆ ಕೆಲಸ ಸ್ಥಗಿತಗೊಂಡಿದ್ದರೂ ಸಹ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಕೊಡಗು ಪ್ಯಾಕೇಜ್‍ನಿಂದ ಹಣ ಬಿಡುಗಡೆಯಾಗದ ಹಿನ್ನೆಲೆ ಗುತ್ತಿಗೆದಾರರು ಇನ್ನಿಲ್ಲದ ಸಂಕಷ್ಟಕ್ಕೆ ತುತ್ತಾಗಿದ್ದೇವೆ. ಹೊರ ಭಾಗದಿಂದ ಬಡ್ಡಿಗೆ ಹಣ ತಂದು ಕೆಲಸ ನಿರ್ವಹಿಸಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆ ಬಡ್ಡಿ ಕಟ್ಟಲೂ ಸಹ ಅಸಾಧ್ಯವಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾವುಗಳು ವನವಾಸ ಅನುಭವಿಸುತ್ತಿದ್ದೇವೆ ಎಂದು ಟೆಂಡರ್ ಸಮಿತಿ ಅಧ್ಯಕ್ಷ ವಿ.ಎ. ಲಾರೆನ್ಸ್ ಅಳಲುತೋಡಿಕೊಂಡರು.

ಹಣ ಬಿಡುಗಡೆಯಾದರೂ ಬಡ್ಡಿ ಕಟ್ಟಲು ಸರಿಯಾಗುತ್ತದೆ. ಮನೆ ಮಂದಿ ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಅತಿವೃಷ್ಟಿಯಿಂದ ಅನೇಕ ರಸ್ತೆಗಳು ಹಾಳಾಗಿವೆ. ಈ ಸಂದರ್ಭ ತುರ್ತು ಕಾಮಗಾರಿ ಕೈಗೊಳ್ಳಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ. ಆದರೆ ಕೆಲಸ ಮಾಡಲು ಹಣ ಇಲ್ಲದೇ ಬರಿಗೈಯಲ್ಲಿದ್ದೇವೆ. ತಕ್ಷಣ ಅನುದಾನ ಬಿಡುಗಡೆಗೊಳಿಸುವ ಭರವಸೆ ಲಭಿಸುವವರೆಗೂ ಧರಣಿಯನ್ನು ಹಿಂಪಡೆಯುವದಿಲ್ಲ. ಕಚೇರಿ ಎದುರೇ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಸುತ್ತೇವೆ ಎಂದು ಲಾರೆನ್ಸ್ ತಿಳಿಸಿದರು.

ಪ್ರತಿಭಟನೆಯಲ್ಲಿ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ಕುಶಾಲನಗರ ವಿಭಾಗದ ಟೆಂಡರ್ ಸಮಿತಿ ಅಧ್ಯಕ್ಷ ಪುರುಷೋತ್ತಮ್ ರೈ, ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಮನೋಹರ್, ಎಸ್.ಸಿ.ಎಸ್‍ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಸಿ. ವಿಜಯ, ಗುತ್ತಿಗೆದಾರರಾದ ಆರ್.ಸಿ. ಗಣೇಶ್, ಚಂಗಪ್ಪ, ಹೆಚ್.ಕೆ. ಮಾದಪ್ಪ, ಪವನ್‍ಕುಮಾರ್, ಹರಗ ಉದಯ, ಕೆ.ಎನ್. ಶಿವಕುಮಾರ್, ಓ.ಎಂ. ಸಂತೋಷ್ ಸೇರಿದಂತೆ 50ಕ್ಕೂ ಅಧಿಕ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತುರ್ತು ಕಾಮಗಾರಿ ಆಗುತ್ತಿಲ್ಲ-ಶಿವಕುಮಾರ್: ವಿಶೇಷ ಪ್ಯಾಕೇಜ್ ಹಣ ಬಿಡುಗಡೆಯಾಗದಿರುವ ಬಗ್ಗೆ ಗುತ್ತಿಗೆದಾರರು ಎಲ್ಲಾ ಕಾಮಗಾರಿಗಳನ್ನೂ ಸ್ಥಗಿತಗೊಳಿಸಿದ್ದು, ಮಳೆಯಾಗುತ್ತಿರುವ ಹಿನ್ನೆಲೆ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳನ್ನೂ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವಿಶೇಷ ಪ್ಯಾಕೇಜ್‍ನ ಹಣ ಬಿಡುಗಡೆ ಮಾಡುವ ಅಧಿಕಾರ ತಮಗಿಲ್ಲ. ಇಲಾಖೆಯ ಮೇಲಧಿಕಾರಿಗಳೇ ಈ ಬಗ್ಗೆ ಕ್ರಮವಹಿಸುತ್ತಾರೆ. ಪ್ರತಿಭಟನಾಕಾರರು ಮನವಿ ಪತ್ರ ನೀಡಿದರೆ ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅಭಿಪ್ರಾಯಿಸಿದ್ದಾರೆ.