ಮಡಿಕೇರಿ, ಆ. 13: ಸಾಮಾಜಿಕ ಜಾಲ ತಾಣಗಳಲ್ಲಿ ರೋಟರಿಯ ಸಮಾಜಸೇವಾ ಕಾರ್ಯ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವದರೊಂದಿಗೆ ಮತ್ತಷ್ಟು ಫಲಾನುಭವಿಗಳಿಗೆ ರೋಟರಿಯ ಜನಸೇವೆಯ ಮಾಹಿತಿಯನ್ನು ತಲಪಿಸಬೇಕೆಂದು ರೋಟರಿ ಜಿಲ್ಲೆ 3150ರ ಮಾಜಿ ಗವರ್ನರ್ ರವಿ ವಡ್ಲಮನಿ ಹೇಳಿದ್ದಾರೆ. ನಗರದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಸದಸ್ಯತ್ವ, ಪೋಲಿಯೋ ಪ್ಲಸ್, ಪಬ್ಲಿಕ್ ಇಮೇಜ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರವಿ ವಡ್ಲಮನಿ, ರೋಟರಿ ಸೇವಾ ಸಂಘಟನೆಯ ಈವರೆಗಿನ ಕಾರ್ಯಯೋಜನೆಗಳ ಅಪೂರ್ವ ಯಶಸ್ಸಿನ ಆಧಾರದ ಮೇಲೆ ರೋಟರಿಯನ್ನು ಬ್ರಾಂಡ್ ಎಂದು ಪರಿಗಣಿಸಿ ಮತ್ತಷ್ಟು ಸದಸ್ಯರನ್ನು ಆಕರ್ಷಿಸುವದರೊಂದಿಗೆ ಮತ್ತಷ್ಟು ಫಲಾನುಭವಿಗಳಿಗೆ ರೋಟರಿ ಸೇವಾ ಕಾರ್ಯಯೋಜನೆಯನ್ನು ತಲಪಿಸಬೇಕಾದ ಅಗತ್ಯವಿದೆ ಎಂದರು. ನಾಯಕತ್ವ ಗುಣ, ಉತ್ತಮ ಪ್ರಜೆಗಳಾಗಲು ರೋಟರಿಯನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂದು ಸಮಾಜಕ್ಕೆ ಮನದಟ್ಟು ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದ ರವಿ ವಡ್ಲಮನಿ, ವ್ಯಕ್ತಿಗಳು ಎಷ್ಟೇ ಕೆಲಸ ಮಾಡಿದರೂ ಅವರ ಅಗಲಿಕೆಯ ನಂತರ ಹೆಸರು ನೆನಪಾಗಿಯಷ್ಟೇ ಉಳಿಯುತ್ತದೆ. ಆದರೆ, ರೋಟರಿಯಂಥ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯ ಕಾರ್ಯಯೋಜನೆಗಳು ಸಮಾಜದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯುತ್ತದೆ. ರೋಟರಿ ಎಂಬ ಆಲದ ಮರದಡಿ ಲಕ್ಷಾಂತರ ನಾಯಕರು ಬೆಳೆಯುತ್ತಿದ್ದಾರೆ ಎಂದೂ ಅವರು ಶ್ಲಾಘಿಸಿದರು. ರೋಟರಿಯ ಪ್ರಭಾವವನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಪರಿಣಾಮಕಾರಿ ಯಾಗಿ ಜನಸಮುದಾಯಕ್ಕೆ ತಲಪಿಸಬೇಕೆಂದೂ ಅವರು ಕರೆ ನೀಡಿದರು.

ಭಾರತದ ಪೋಲಿಯೋ ಸರ್ವೇಕ್ಷಣಾ ಘಟಕದ ಪ್ರಮುಖ ಡಾ.ಸುಧೀರ್ ನಾಯಕ್ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿಯೂ ಪೋಲಿಯೊ ಸಂಬಂಧಿತ ಆಗಿಂದಾಗ್ಗೆ ಪರೀಕ್ಷೆಗಳನ್ನು 15 ವರ್ಷದೊಳಗಿನ ಮಕ್ಕಳಲ್ಲಿ ನಡೆಸಲಾಗುತ್ತಿದೆ. ಸಂಶಯಾಸ್ಪದ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತದೆ ಎಂದರು. ಪೋಲಿಯೊ ಹೊರತು ಪಡಿಸಿದಂತೆ ಇತರ ಮಾರಕ ಕಾಯಿಲೆಗಳ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದ್ದು, ಸರ್ಕಾರಿ ಯೋಜನೆಗಳಿಗೆ

(ಮೊದಲ ಪುಟದಿಂದ) ರೋಟರಿ ಸಂಸ್ಥೆಗಳು ಕೈಜೋಡಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಜನರನ್ನು ತಲಪಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೋಟರಿ ಸದಸ್ಯತ್ವ ವಿಭಾಗದ ಸಹಾಯಕ ವಿಭಾಗೀಯ ಸಂಚಾಲಕ ಮಾಜಿ ಗವರ್ನರ್ ವಿ.ಜಿ. ನಾಯ್ನಾರ್ ಮಾತನಾಡಿ, ನೂತನ ಸದಸ್ಯರನ್ನು ರೋಟರಿ ಸಂಸ್ಥೆಗೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ಸೂಚಿಸಿದರು.

ರೋಟರಿ ಜಿಲ್ಲಾ ಗವರ್ನರ್ ಪಿ.ರೋಹಿನಾಥ್ ಮಾತನಾಡಿ, ಪೊಲಿಯೋ ನಿರ್ಮೂಲನೆ ನಿಟ್ಟಿನಲ್ಲಿ ಜಾಗತಿಕವಾಗಿ ರೋಟರಿ ವಹಿಸಿದ ಪಾತ್ರ ಅತ್ಯಂತ ಗಮನಾರ್ಹವಾಗಿದ್ದು ವಿಶ್ವದಾದ್ಯಂತ ಪೋಲಿಯೊ ಬಹುತೇಕ ನಿರ್ಮೂಲನೆಯಾಗಿದೆ. ಆದರೆ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ಸರಿಯಾದ ಕಾಳಜಿಯಿಲ್ಲದೆ ಪೋಲಿಯೊ ಪ್ರಕರಣಗಳು ವರದಿಯಾಗುತ್ತಿದ್ದು, ಪಾಕ್‍ನಿಂದ ಭಯೋತ್ಪಾದಕರಂತೆ ಪೋಲಿಯೊ ಕೂಡ ವಿಶ್ವವ್ಯಾಪಿ ನುಸುಳುತ್ತಿದೆ ಎಂದು ಟೀಕಿಸಿದರು.

ಸರ್ಕಾರ ಮತ್ತು ಜನಸಮುದಾಯದ ಮಧ್ಯೆ ರೋಟರಿ ಸಂಸ್ಥೆಯು ಸಂಪರ್ಕ ಸೇತುವಂತೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಪೋಲಿಯೊ ನಿವಾರಣೆ ಕುರಿತಂತೆ ಮಾಹಿತಿ ನೀಡುವ ಕಾರ್ಯಕ್ರಮವನ್ನೂ ರೋಟರಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ವಿಸ್ತರಣಾ ಸಮಿತಿ ಜಿಲ್ಲಾ ಅಧ್ಯಕ್ಷ ಬಿ.ಶೇಖರ್ ಶೆಟ್ಟಿ ಮಾತನಾಡಿ, ರೋಟರಿ ಜಿಲ್ಲೆ 3181 ಅಂತರರಾಷ್ಟ್ರೀಯ ರೋಟರಿ ನಿಗದಿಪಡಿಸಿದ ಗುರಿಯನ್ನೂ ಮೀರಿ ಕೇವಲ 45 ದಿನಗಳಲ್ಲಿ ಅತ್ಯಧಿಕ ಸದಸ್ಯರನ್ನು ನೋಂದಾಯಿಸಿಕೊಂಡಿದೆ. ಈ ವರ್ಷದಲ್ಲಿಯೇ 4 ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆಯು ಸದಸ್ಯರ ಸಂಖ್ಯೆಯನ್ನು 3300 ರಿಂದ 3700 ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದ್ದು, 15 ಹೊಸ ಕ್ಲಬ್‍ಗಳ ಪ್ರಾರಂಭದ ಯೋಜನೆಯೂ ಇದೆ ಎಂದರು. ಹೊಸದಾಗಿ ರೋಟರಿ ಸೇರುವ ಸದಸ್ಯರ ಸಂಖ್ಯೆಗಿಂತ ಅವರಲ್ಲಿ ಸಾಮಾಜಿಕ ಕಾರ್ಯಯೋಜನೆಗಳ ಬದ್ಧತೆ ಮುಖ್ಯವಾಗಬೇಕೆಂದೂ ಶೇಖರ್ ಶೆಟ್ಟಿ ಅಭಿಪ್ರಾಯಪಟ್ಟರು.

ರೋಟರಿ ಜಿಲ್ಲಾ ಸದಸ್ಯತ್ವ ವಿಸ್ತರಣಾ ವಿಭಾಗದ ಅಧ್ಯಕ್ಷ ಬಿ.ಕೆ.ರವೀಂದ್ರ ರೈ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 3073 ಸದಸ್ಯರು ರೋಟರಿಯಲ್ಲಿದ್ದು, 35 ರೋಟರ್ಯಾಕ್ಟ್‍ಗಳು, 105 ಆರ್‍ಸಿಸಿಗಳು ಇದ್ದು, ಸಾಮಾಜಿಕ ಕಾರ್ಯ ಯೋಜನೆಗಳೊಂದಿಗೆ ರೋಟರಿ ಸದಸ್ಯರು ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಕಟಿಬದ್ದರಾಗಿದ್ದಾರೆ ಎಂದರು. ರೋಟರಿ ವೆಬ್‍ಸೈಟ್ ಮತ್ತು ಮೊಬೈಲ್ ಆ್ಯಪ್ ಕುರಿತಂತೆ ನರೇಂದ್ರ ರಾವ್ ಮಾಹಿತಿ ನೀಡಿದರು.

ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಕುಮಾರ್ ವಿ.ರಾವ್, ಪೋಲಿಯೊ ಪ್ಲಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಮುರಳಿ ಕೃಷ್ಣ, ವಲಯ 6 ರ ಅಸಿಸ್ಟೆಂಟ್ ಗವರ್ನರ್ ಧರ್ಮಪುರ ನಾರಾಯಣ್, ಕಾರ್ಯಾಗಾರ ಸಮಿತಿ ಅಧ್ಯಕ್ಷ ಮೋಹನ್‍ಪ್ರಭು, ಕಾರ್ಯದರ್ಶಿ ದೇವಣೀರ ತಿಲಕ್, ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್, ರೋಟರಿ ಜಿಲ್ಲೆಯ 2020-21 ನೇ ಸಾಲಿನ ನಿಯೋಜಿತ ಗವರ್ನರ್ ರಂಗನಾಥ ಭಟ್, ಮಾಜಿ ಗವರ್ನರ್‍ಗಳಾದ ಕೃಷ್ಣಶೆಟ್ಟಿ, ದೇವದಾಸ ರೈ, ಮಿಸ್ಟಿಹಿಲ್ಸ್ ಕಾರ್ಯದರ್ಶಿ ಎಂ.ಯು. ಮಹೇಶ್, ರೋಟರಿ ಜಿಲ್ಲಾ ಕಾರ್ಯಕ್ರಮ ಕಾರ್ಯದರ್ಶಿ ಸಂತೋಷ್ ಶೆಟ್ಟಿ ವೇದಿಕೆಯಲ್ಲಿದ್ದರು.

ಶ್ರೀಹರಿ, ಶಮಿಕ್ ರೈ ಪ್ರಾರ್ಥಿಸಿ ಕಾರ್ಯಕ್ರಮವನ್ನು ಬಿ.ಜಿ. ಅನಂತಶಯನ, ಲೀನಾ ಪೂವಯ್ಯ ನಿರೂಪಿಸಿದರು. ರೋಟರಿ ಜಿಲ್ಲೆಯಾದ್ಯಂತಲಿನ 635 ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.