ನಾಪೋಕ್ಲು,ಆ.14: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಕಣದಲ್ಲಿ 26 ಅಭ್ಯರ್ಥಿಗಳು ಉಳಿದುಕೊಂಡಿದ್ದು ಈಗಾಗಲೇ ಸ್ಪರ್ಧಾಳುಗಳು ವ್ಯಾಪಕ ಪ್ರಚಾರ ಕೈಗೊಂಡಿದ್ದು ಚುನಾವಣೆಯಲ್ಲಿ ತೀವ್ರ ಪೈಪೋಟಿ ಕಂಡುಬರುತ್ತದೆ. ಆಡಳಿತ ಮಂಡಳಿಗೆ 12 ಸ್ಥಾನಗಳಿಗೆ ಚುನಾವಣಾ ಕಣದಲ್ಲಿ 32 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಮೇದರ ಎಸ್.ವಾಸು ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಸಲ್ಲಿಸಿದ್ದು ನಾಮಪತ್ರದಲ್ಲಿ ದಾಖಲೆ ಅಸಮರ್ಪಕವಾಗಿದ್ದು ನಾಮಪತ್ರ ತಿರಸ್ಕøತಗೊಂಡಿದೆ. ನಾಮಪತ್ರ ವಾಪಸು ಪಡೆಯಲು ನಿನ್ನೆ ಅಂತಿಮ ದಿನಾಂಕವಾಗಿದ್ದು ನಾಲ್ವರು ನಾಮಪತ್ರ ವಾಪಸು ಪಡೆದಿದ್ದಾರೆ. 26 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದು, ಅವರಿಗೆ ಚುನಾವಣಾ ಚಿಹ್ನೆ ನೀಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಮಾಹಿತಿ ನೀಡಿದ್ದಾರೆ. ಚುನಾವಣೆಯು ತಾ. 19ರಂದು ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಜಟಾಪಟಿ : ನಾಮಪತ್ರ ಪರಿಶೀಲನೆಗೆ ಭಾನುವಾರ ಅಂತಿಮ ದಿನವಾಗಿದ್ದು ನಾಪೋಕ್ಲು ಗ್ರಾಮಪಂಚಾಯತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಅವರ ನಾಮಪತ್ರ ತಿರಸ್ಕøತಗೊಂಡಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು. ಈ ಸಂದರ್ಭ ಮಾತಿನ ಚಕಮಕಿ ನಡೆದು ಆತಂಕಕ್ಕೆ ಕಾರಣವಾಗಿ ಪೋಲಿಸರು ಮಧ್ಯ ಪ್ರವೇಶಿಸಿ ಪ್ರಕರಣ ತಿಳಿಗೊಳಿಸಿದರು.