*ಗೋಣಿಕೊಪ್ಪ, ಆ. 14: ಮಳೆ ಹಾನಿ ನಷ್ಟಪರಿಹಾರ ನೀಡಲು ಕಂದಾಯ ಇಲಾಖೆ ಅಧಿಕಾರಿಗಳು ನೇರವಾಗಿ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡಲು ಕ್ರಮಕೈಗೊಳ್ಳ ಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಸೂಚಿಸಿದರು.
ತಿತಿಮತಿ ಬಾಳುಮನಿ ಸೇತುವೆ, ಬಾಳೆಲೆ, ನಿಟ್ಟೂರು ಸೇತುವೆ, ಮಲ್ಲೂರು ಸೇತುವೆ ಹಾಗೂ ಕಾನೂರು ಗ್ರಾಮಗಳಿಗೆ ತೆರಳಿ ಮಳೆಹಾನಿಯ ಪ್ರದೇಶಗಳನ್ನು ವಿಕ್ಷಿಸಿ ಮಾತನಾಡಿದರು.
ಕಾಫಿ ಹಾಗೂ ಕಾಳುಮೆಣಸು ಬೆಳೆ ನಷ್ಟ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವದು, ಕಾಫಿಬೋರ್ಡ್ ಮೂಲಕ ಮಳೆಯಿಂದ ಉಂಟಾದ ನಷ್ಟಕ್ಕೆ ಪರಿಹಾರ ಒದಗಿಸಲು ಸರ್ವೆ ಮಾಡುವ ಮೂಲಕ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗುವದು ಎಂದರು.
ಒಂದು ಎಕರೆ ಭತ್ತದ ಕೃಷಿಗೆ ನೀಡುವ 1800 ರೂ. ಸಹಾಯಧನವನ್ನು ಹೆಚ್ಚಿಸಲಾಗುತ್ತದೆ ಮತ್ತು ಜಾನುವಾರುಗಳ ಸಾವಿಗೆ ಹೆಚ್ಚಿನ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಮಲ್ಲೂರು ಸೇತುವೆ ಕಾಮಗಾರಿ ಹಾಗೂ ರಸ್ತೆ ಅಭಿವೃದ್ಧಿಗೆ 5 ಕೋಟಿ ಅನುದಾನ ನೀಡುವದಾಗಿ ಎಂದು ತಿಳಿಸಿದರು.
ಬಾಳೆಲೆ ನಿಟ್ಟೂರು ಸೇತುವೆಯ ಎರಡು ಬದಿಗಳ ತಡೆಗೋಡೆ ನಿರ್ಮಾಣಕ್ಕೆ ಮತ್ತು ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವದಾಗಿ ಸ್ಥಳೀಯ ಗ್ರಾಮಸ್ಥರ ಒತ್ತಾಯ ಮೇರೆ ಬರವಸೆ ನೀಡಿದರು.
ಆನೆ, ಹುಲಿ ಧಾಳಿಗಳು ಅಧಿಕವಾಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳು ಮುಂದಾಗಬೇಕು, ಮಳೆಯ ತೀವ್ರತೆಯಿಂದ ಬೆಳೆ ನಷ್ಟ, ಮನೆ ಕುಸಿತ ಅಂತಹ ಅನಾಹುತಗಳು ನಡೆಯುತ್ತಿವೆ, ಇಲಾಖೆ ಮುಂಜಾಗ್ರತಾ ಕ್ರಮ ವಹಿಸಿ ನಷ್ಟಕ್ಕೆ ಪರಿಹಾರ ಒದಗಿಸಿಕೊಡಬೇಕು ಎಂದು ತಿಳಿಸಿದರು.
ಸಚಿವರ ಮಳೆ ಹಾನಿ ಸ್ಥಳಗಳ ಪರಿಶೀಲನೆ ಸಂದರ್ಭ ಜೆ.ಡಿ.ಎಸ್. ಪ್ರಮುಖ, ಎಂ.ಟಿ. ಕಾರ್ಯಪ್ಪ, ಕಾರ್ಮಾಡು ಸುಬ್ಬಣ್ಣ, ಎಸ್.ಎಂ. ಚಂಗಪ್ಪ, ವಾಟೆರಿರ ವೀರಜ್, ವಿನಿಲ್, ಮನೆಯಪಂಡ ಬೆಳ್ಳಿಯಪ್ಪ, ಕೊಳೆರ ದಯಾ ಚಂಗಪ್ಪ, ಗಣೇಶ್ ಹೆಚ್.ಬಿ., ಆರ್.ಎಂ.ಸಿ. ಸದಸ್ಯ ಸುಜು ಬೋಪಯ್ಯ, ಬಿ.ಜೆ.ಪಿ. ಪ್ರಮುಖ ಅರಮಣಮಾಡ ರಂಜನ್, ಗ್ರಾ.ಪಂ. ಸದಸ್ಯರುಗಳಾದ ಚೆಕ್ಕೆರ ಸೂರ್ಯ, ಕೊಕ್ಕೆಯಂಗಡ ರಂಜನ್, ಕೃಷ್ಣ ಗಣಪತಿ ಸೇರಿದಂತೆ ಅಧಿಕಾರಿಗಳು, ಜೆ.ಡಿ.ಎಸ್. ಕಾರ್ಯಕರ್ತರು ಹಾಜರಿದ್ದರು.
ಚಿತ್ರ ವರದಿ :ಎನ್.ಎನ್. ದಿನೇಶ್