ಸೋಮವಾರಪೇಟೆ, ಆ. 14: 2016-17ನೇ ಸಾಲಿನ ಕೊಡಗು ಪ್ಯಾಕೇಜ್‍ನಲ್ಲಿ ಸೋಮವಾರಪೇಟೆ ತಾಲೂಕು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಘೋಷಿಸಲ್ಪಟ್ಟ ಅನುದಾನವನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ, ಗುತ್ತಿಗೆದಾರರು ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿ ಎದುರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ 2016-17ನೇ ಸಾಲಿನಲ್ಲಿ ಸೋಮವಾರಪೇಟೆ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ 16 ಕೋಟಿ ಹಣ ಘೋಷಣೆಯಾಗಿದ್ದು, ಇದರಲ್ಲಿ 52 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಈವರೆಗೆ ಕೇವಲ 3 ಕೋಟಿ ಹಣ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ 13 ಕೋಟಿ ಹಣ ಬಿಡುಗಡೆಗೆ ಬಾಕಿ ಉಳಿದಿದೆ. ಈ ಬಗ್ಗೆ ಇಲಾಖಾಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣ ಹಣ ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಗುತ್ತಿಗೆದಾರರ ಸಂಘದ ಟೆಂಡರ್ ಕಮಿಟಿ ಅಧ್ಯಕ್ಷ ವಿ.ಎ. ಲಾರೆನ್ಸ್, ಮಾಹಿತಿ ಹಕ್ಕು ಕಾರ್ಯಕರ್ತರೆಂದು ಹೇಳಿಕೊಳ್ಳುವ ವ್ಯಕ್ತಿ ತಾಲೂಕಿನ ಎಲ್ಲಾ ರಸ್ತೆಗಳು ಕಳಪೆಯಾಗಿದೆ ಎಂದು ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರಿಂದಾಗಿ ಎಲ್ಲಾ ಬಿಲ್‍ಗಳನ್ನು ತಡೆಹಿಡಿಯಲಾಗಿದೆ. ಒಂದು ವೇಳೆ ಕಳಪೆಯಾಗಿರುವ ರಸ್ತೆಗಳ ಬಗ್ಗೆ ದೂರು ನೀಡಿದ್ದರೆ ಹೋರಾಟವನ್ನು ಒಪ್ಪಬಹುದಿತ್ತು. ಆದರೆ ಎಲ್ಲಾ ರಸ್ತೆಗಳ ಬಗ್ಗೆ ದೂರು ನೀಡಿ ಬಿಲ್ ತಡೆಹಿಡಿದಿರುವದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂದೂವರೆ ವರ್ಷದಿಂದ ಹಣ ಬಿಡುಗಡೆಯಾಗದೇ ಗುತ್ತಿಗೆದಾರರು ಸಂಕಷ್ಟಕ್ಕೆ ತಲುಪಿದ್ದಾರೆ. ಬಡ್ಡಿಗೆ ಹಣ ತಂದು ರಸ್ತೆ ಕಾಮಗಾರಿಯನ್ನು ನಿರ್ವಹಿಸಿದ್ದೇವೆ. ಇದೀಗ ಬಡ್ಡಿ ಹಣ ಕಟ್ಟಲಾಗದೇ ತೊಂದರೆ ಎದುರಿಸುವಂತಾಗಿದೆ. ತಕ್ಷಣ ಇಲಾಖೆಯ ಸೂಪರಿಂಟೆಂಟ್ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಅಹವಾಲು ಆಲಿಸಬೇಕು ಎಂದು ಒತ್ತಾಯಿಸಿದರು.
ವಿಶೇಷ ಪ್ಯಾಕೇಜ್‍ನಲ್ಲಿ ಇಂದಿಗೂ 13 ಕೋಟಿ ಹಣ ಬಿಡುಗಡೆಗೆ ಬಾಕಿ ಉಳಿದಿದೆ. ಜೆಡಿಎಸ್ ಮುಖಂಡರು, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷರೂ ಆಗಿರುವ ಮಾಹಿತಿ ಹಕ್ಕು ಕಾರ್ಯ ಕರ್ತರೋರ್ವರು ಅನಾವಶ್ಯಕವಾಗಿ ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಇದೀಗ ರಸ್ತೆ ಬದಿ ಬರೆಕುಸಿತ, ಮರ ಬೀಳುತ್ತಿದ್ದು ತೆರವುಗೊಳಿಸುವಂತೆ ಇಂಜಿನಿಯರ್ ಹೇಳುತ್ತಿದ್ದರೂ ನಮಗೆ ಕೆಲಸ ಮಾಡಲು ಆಗುತ್ತಿಲ್ಲ. ನಮಗೆ ಹಣವೇ ಬಂದಿಲ್ಲವೆಂದಾದರೆ ಕೆಲಸ ಮಾಡುವದಾದರೂ ಹೇಗೆ ಎಂದು ಲಾರೆನ್ಸ್ ಪ್ರಶ್ನಿಸಿದರು.
ಈ ಸಂದರ್ಭ ಸಂತೋಷ್, ಗಣೇಶ್, ಉದಯ, ಮಾದಪ್ಪ, ಮಹೇಶ್ ತಿಮ್ಮಯ್ಯ, ದೇಶ್‍ರಾಜ್, ಪುರುಷೋತ್ತಮ್, ಹನೀಫ್, ಅಣ್ಣಪ್ಪ, ವಿನೋದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.