ಕುಶಾಲನಗರ, ಆ. 23: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾ. 25 ರಂದು ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ 4 ಗಂಟೆ ತನಕ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಶಿಬಿರದ ಪೂರ್ವ ತಯಾರಿಗಾಗಿ ಕುಶಾಲನಗರದಲ್ಲಿ ಸಿದ್ಧತಾ ಕಾರ್ಯ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಶಿಬಿರದಲ್ಲಿ ಹೃದ್ರೋಗ ತಜ್ಞರು ಸೇರಿದಂತೆ ಹಲವು ರೋಗಗಳ ತಪಾಸಣೆ ನಡೆಯಲಿದೆ. ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಶಿಬಿರ ನಡೆಯಲಿದ್ದು ಸ್ಕ್ಯಾನಿಂಗ್, ಇಸಿಜಿ, ರಕ್ತ, ಮೂತ್ರ ಪರೀಕ್ಷೆ ನಡೆಸಿ ಔಷಧಿ ನೀಡಲಾಗುವದು ಎಂದು ತಿಳಿಸಿದ್ದಾರೆ.
ಈ ಸಂದರ್ಭ ಶಾಖಾ ಮಠದ ಶಿವಪುತ್ರ ಸ್ವಾಮೀಜಿ, ಪ.ಪಂ. ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಇದ್ದರು.