ಮಡಿಕೇರಿ, ಆ. 23: ಕಳೆದ ಇಪ್ಪತ್ತು ದಿನಗಳಿಂದ ಮಡಿಕೇರಿ ಸೇರಿದಂತೆ ಈ ತಾಲೂಕಿನ ಗ್ರಾಮೀಣ ಭಾಗಗಳು ಮತ್ತು ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಸುತ್ತ ಮುತ್ತ ವಾಯು-ವರುಣನ ರೌದ್ರ ನರ್ತನದೊಂದಿಗೆ ಜಲಸ್ಫೋಟ ಹಾಗೂ ಭೂಕುಸಿತದಿಂದ ಎದುರಾಗಿದ್ದ ಭಯಾನಕ ಪರಿಸ್ಥಿತಿಯ ನಡುವೆ ಇಂದು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳತ್ತ ಹೆಜ್ಜೆ ಹಾಕಿದ್ದಾರೆ. ಚಿಣ್ಣರು ಅಂಗನವಾಡಿಗಳಿಗೆ ಧಾವಿಸಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡಿರುವ ಪ್ರದೇಶಗಳ 61 ಶಾಲೆಗಳು ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿ ಹೊರತು ಇತರೆಡೆಗಳಲ್ಲಿ ಇಂದಿನಿಂದ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡು ವಿದ್ಯಾರ್ಥಿಗಳು ಜ್ಞಾನ ದೇಗುಲದತ್ತ ಹೆಜ್ಜೆ ಹಾಕುವಂತಾಗಿದೆ. ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಒಂದಿಷ್ಟು ಗ್ರಾಮೀಣ ಪ್ರದೇಶದಲ್ಲಿ ತುರ್ತು ಸೇವೆಗೆ ರೂಪಿಸಿರುವ ಪರಿಹಾರ ಕೇಂದ್ರಗಳಲ್ಲಿ 51 ಕಡೆ ಅಲ್ಲೇ ಇರುವ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಶಿಕ್ಷಕರನ್ನು ನಿಯೋಜಿಸಲಾಗಿದೆ.
ಇಂತಹ ಪ್ರದೇಶ ಹೊರತುಪಡಿಸಿ ದಂತೆ ವೀರಾಜಪೇಟೆ ತಾಲೂಕಿನ ಎಲ್ಲ ಶಾಲಾ-ಕಾಲೇಜುಗಳೊಂದಿಗೆ ಇತರೆಡೆಗಳಲ್ಲಿ ಇಂದಿನಿಂದ ದೈನಂದಿನ ಪಠ್ಯಕ್ರಮ ಆರಂಭಗೊಂಡಿರುವದಾಗಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.