ಮಡಿಕೇರಿ, ಆ. 23: 2013ರಲ್ಲಿ ಭೂಮಿಯ ಕಂಪನದೊಂದಿಗೆ ಬಿರುಕು ಕಾಣಿಸಿಕೊಂಡಿದ್ದ ಮದೆನಾಡು ಗ್ರಾ.ಪಂ. ವ್ಯಾಪ್ತಿಯ 2ನೇ ಮೊಣ್ಣಂಗೇರಿ, ಜೋಡುಪಾಲ, ದೇವರಕೊಲ್ಲಿ, ಅರೆಕಲ್ಲು, ಪಂದಕಳ ಮೊದಲಾದೆಡೆಗಳಿಂದ ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸಂಪಾಜೆ ಹಾಗೂ ಕಲ್ಲುಗುಂಡಿಯ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ.
ಈ ಎಲ್ಲಾ ವಸತಿ ಪ್ರದೇಶಗಳ ಬೆಟ್ಟಸಾಲುಗಳಲ್ಲಿ ಭೂಮಿ ಕಂಪಿಸಿದ ಅನುಭವದೊಂದಿಗೆ ಜಲಸ್ಫೋಟ ಗೊಂಡ ಪರಿಣಾಮ, ಪ್ರಾಣಾಪಾಯ ದಿಂದ ಮನೆಗಳನ್ನು ತೊರೆದಿರುವ ಗ್ರಾಮಸ್ಥರು; ತಮ್ಮ ಸಾಕು ಪ್ರಾಣಿಗಳನ್ನು ಬಿಟ್ಟು ಉಟ್ಟ ಬಟ್ಟೆಗಳಲ್ಲೇ ಹೊರ ಬಂದಿದ್ದಾರೆ. ಭವಿಷ್ಯದ ನೆಲೆಗಾಗಿ ಕಣ್ಣೀರುಗರೆಯುತ್ತಿದ್ದು, ಜನಪ್ರತಿನಿಧಿ ಗಳು ಸಾಂತ್ವನ ಹೇಳುತ್ತಿದ್ದಾರೆ.
ಕಳೆದ ಶುಕ್ರವಾರ ಗ್ರಾಮ ತೊರೆದಿರುವ 700ಕ್ಕೂ ಅಧಿಕ ಮಂದಿಗೆ ಸಂಪಾಜೆ ಸರಕಾರಿ ಶಾಲೆ, ತೆಕ್ಕಿಲದ ಸಮುದಾಯ ಭವನ, ಕಲ್ಲುಗುಂಡಿ ಶಾಲೆಗಳಲ್ಲಿ ಆಸರೆ ಕಲ್ಪಿಸಿ, ಕೊಡಗಿನ ಸಂಪರ್ಕ ಕಡಿದುಕೊಂಡಿ ರುವ ಸಂತ್ರಸ್ತರಿಗೆ ತುರ್ತು ನೆರವು ಒದಗಿಸಲಾಗಿದೆ.
ರಸ್ತೆ ಸಂಪರ್ಕವಿಲ್ಲ: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಹತ್ತಾರು ಕಿ.ಮೀ. ದೂರದಲ್ಲಿರುವ ಮದೆ ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತರಿಗೆ ರಸ್ತೆ ಸಂಪರ್ಕವಿಲ್ಲದೆ ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಿದ್ದು, ಅಲ್ಲಿನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿüಲ್ ಅವರಿಗೆ ಸರಕಾರದಿಂದ ಉಸ್ತುವಾರಿ ವಹಿಸಲಾಗಿದೆ.
ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರಕಳಗಿ, ತೆಕ್ಕಿಲ ಸಮುದಾಯ ಭವನದ ಅಬ್ದುಲ್ ಖಾದರ್ ಸೇರಿದಂತೆ ಸಂಪಾಜೆ ಮತ್ತು ಮದೆ ಹಾಗೂ ಕಲ್ಲುಗುಂಡಿ ಗ್ರಾ.ಪಂ. ಅಧಿಕಾರಿಗಳು, ಕಂದಾಯ ಸಿಬ್ಬಂದಿ, ಸಂಘ ಸಂಸ್ಥೆಗಳ ಸಹಕಾರದಿಂದ ಆರೋಗ್ಯ ಇಲಾಖೆ, ಪೊಲೀಸರು, ಸ್ವಯಂಸೇವಕರು ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ.
ದೊರಕದ ಶವಗಳು : ಕಳೆದ ತಾ. 16 ರಂದು ಸಂಜೆಗತ್ತಲೆ ನಡುವೆ ಜೋಡುಪಾಲ ನಿವಾಸಿ ಕುಡಿಯರ ಬಸಪ್ಪ ಎಂಬವರು ತಮ್ಮ ಕಾರಿನಲ್ಲಿ (ಓಮ್ನಿ) ಆಗಷ್ಟೇ ಸುಳ್ಯ ಸರಕಾರಿ ಆಸ್ಪತ್ರೆಯಿಂದ ಕೆಲಸ ಮುಗಿಸಿ ಮನೆಗೆ ಬಂದಿದ್ದರಂತೆ. ತಮ್ಮ ಕಾರಿನಲ್ಲಿ ಮನೆಗೆ ತಂದಿದ್ದ ಸಾಮಗ್ರಿಗಳನ್ನು ಇಳಿಸುತ್ತಿದ್ದಂತೆ; ಹಠಾತ್ ಪ್ರವಾಹದ ಕೋಡಿ ಹರಿದಿದೆ. ಕ್ಷಣ ಮಾತ್ರದಲ್ಲಿ ಕಾರು ಸಹಿತ ಬಸಪ್ಪ ಹಾಗೂ ಅವರ ಪತ್ನಿ ಗೌರಮ್ಮ, ಪುತ್ರಿ ಮೋನಿಷಾ ಹಾಗೂ ಸಂಬಂಧಿ ಮಂಜುಳ ಎಂಬ ವಿದ್ಯಾರ್ಥಿನಿ ಕೊಚ್ಚಿ ಹೋಗಿದ್ದಾರೆ.
ಬಸಪ್ಪ ಅವರ ಮನೆ ನೆಲ ಸಮಗೊಂಡು ವಾಹನ ಸಂಪೂರ್ಣ ನಜ್ಜುಗುಜ್ಜಾಗಿ ಮಣ್ಣು ಪಾಲಾಗಿದೆ. ಈ ಭಯಾನಕ ದೃಶ್ಯದಿಂದ ಗ್ರಾಮಕ್ಕೆ ಗ್ರಾಮವೇ ಬೆಚ್ಚಿಬೀಳುವದರೊಂದಿಗೆ ಊರು ತೊರೆದಿದ್ದಾರೆ. ಇನ್ನು ಕೂಡ ಗೌರಮ್ಮ ಮತ್ತು ಮದೆ ಮಹೇಶ್ವರ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮಂಜುಳಾಳ ಶವ ಪತ್ತೆಯಾಗಿಲ್ಲ. ಇದುವರೆಗೆ ಹುಡುಕಾಟದಿಂದ ಯಾವದೇ ಸುಳಿವು ಲಭಿಸಿಲ್ಲ.
ಆ ಮೊದಲೇ 2ನೇ ಮೊಣ್ಣಂಗೇರಿ ಗ್ರಾಮದ ಅಲ್ಲಲ್ಲಿ ಜಲಸ್ಫೋಟದೊಂದಿಗೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಪರಿಣಾಮ ಮನೆಗಳನ್ನು ತೊರೆದಿರುವ ನಿವಾಸಿಗಳು ಬೇರೆ ಬೇರೆ ಕಡೆಗಳಲ್ಲಿ ಚದುರಿಹೋಗಿದ್ದಾರೆ. ಅನೇಕರು ದೂರದ ಬಂಧುಗಳ ಆಸರೆ ಪಡೆದಿದ್ದಾರೆ. ಇನ್ನುಳಿದಂತೆ ಮಡಿಕೇರಿ, ಮೇಕೇರಿ, ಚೇರಂಬಾಣೆ, ಸಂಪಾಜೆ, ಕಲ್ಲುಗುಂಡಿ ಮುಂತಾದೆಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ತಂದೆ, ತಾಯಿ, ಮಕ್ಕಳು ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕ ನೆರವಿನಲ್ಲಿದ್ದಾರೆ.
ಈ ಮಂದಿಗೆ ಸದ್ಯದ ಪರಿಸ್ಥಿತಿಯಲ್ಲಿ ಯಾವದೇ ರಸ್ತೆ ಸಂಪರ್ಕವಿಲ್ಲದೆ, ಸಂಪಾಜೆ ಗಡಿಯಾಚೆ ಸಿಲುಕಿದ್ದಾರೆ. ಮಂಗಳೂರು ಹೆದ್ದಾರಿ ಕುಸಿತ, ಪ್ರವಾಹದಿಂದಾಗಿ ನಿನ್ನೆಯ ತನಕ ಈ ಮಂದಿಗೆ ತಮ್ಮ ತಮ್ಮ ಮನೆಗಳಿಗೂ ತೆರಳಿ ವಾಸ್ತವ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಆತಂಕದ ನಡುವೆ ದಿನಗಳೆಯುತ್ತಿರುವ ಈ ಮಂದಿ ಅನ್ನ, ವಸ್ತ್ರ, ನಿತ್ಯೋಪಯೋಗಿ ವಸ್ತುಗಳು ದಾನಿಗಳಿಂದ ಲಭ್ಯವಿದ್ದರೂ ಲೆಕ್ಕಿಸದೆ ಸೂರಿಗಾಗಿ ಹಂಬಲಿಸುತ್ತಿದ್ದಾರೆ.