ಮಡಿಕೇರಿ, ಆ.23: ಜಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಭೂ ಕುಸಿತ ಉಂಟಾಗಿ ಹಲವಾರು ಜಾನುವಾರು ಸಂಕಷ್ಟಕ್ಕೀಡಾಗಿದ್ದು, ಜಾನುವಾರುಗಳನ್ನು ರಕ್ಷಿಸುವದು ಹಾಗೂ ಪೋಷಿಸುವದು ಸರ್ಕಾರದ ಜವಾಬ್ದಾರಿಯಾಗಿದೆ.
ಭೂ ಕುಸಿತದಿಂದ ಹಲವಾರು ಜಾನುವಾರುಗಳು ತನ್ನ ಮಾಲೀಕನಿಲ್ಲದೆ ಜೀವನೋಪಾಯಕ್ಕಾಗಿ ಅಲೆಮಾರಿಯಾಗುವ ಸಾಧ್ಯತೆ ಇದೆ. ಜಾನುವಾರುಗಳನ್ನು ರಕ್ಷಿಸಿ ಅವುಗಳ ಪಾಲನೆಗಾಗಿ ಸರ್ಕಾರವು ಸೋಮವಾರಪೇಟೆ ತಾಲೂಕಿನ ಕುಶಾಲನಗರ ಹೋಬಳಿಯ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿ ಸುಧಾರಿಸುವ ತನಕ ಜಾನುವಾರುಗಳನ್ನು ಈ ಕೇಂದ್ರದಲ್ಲಿ ಪಾಲನೆ ಮಾಡಲಾಗುವದು.
ಈ ಸಂಬಂಧ ಈಗಾಗಲೇ ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಈ ರೀತಿ ಸಂಕಷ್ಟಕ್ಕೀಡಾದ ಜಾನುವಾರುಗಳು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ: 08272-229449 ಸಂಪರ್ಕಿಸಬಹುದು. ಅಥವಾ ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ ಮಡಿಕೇರಿ ದೂ. ಸಂ:08272-228805, ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ ವೀರಾಜಪೇಟೆ ದೂ.ಸಂ:08274-257228, ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ ಸೋಮವಾರಪೇಟೆ ದೂ. ಸಂ:08276-282127 ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ.
ಜಾನುವಾರುಗಳು ಅಲ್ಲದೇ ಇತರೆ ಸಾಕುಪ್ರಾಣಿಗಳು ಸಹ ಸಂಕಷ್ಟಕ್ಕೀಡಾಗಿದ್ದು, ಅವುಗಳಿಗೆ ತುರ್ತು ಚಿಕಿತ್ಸೆ, ಆಹಾರ ಮತ್ತು ಸಂರಕ್ಷಣೆಗಾಗಿ ಸರ್ಕಾರವು ಕ್ರಮ ವಹಿಸಲಾಗುತ್ತಿದ್ದು, ಗೋಶಾಲೆಯನ್ನು ಪರಿಸ್ಥಿತಿ ಸುಧಾರಿಸುವ ತನಕ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ನಿರ್ವಹಿಸಬೇಕಾಗಿರುವದರಿಂದ ಸಾರ್ವಜನಿಕರು/ ದಾನಿಗಳು ಪಶು ಆಹಾರ, ಒಣಹುಲ್ಲು, ಹಸಿ ಹುಲ್ಲು, ಮತ್ತು ಶ್ವಾನ ಆಹಾರಗಳನ್ನು ದೇಣಿಗೆಯಾಗಿ ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜರ್ಸಿ ತಳಿ ಸಂವರ್ಧನಾ ಕೇಂದ್ರ ಕೂಡಿಗೆ ದೂರವಾಣಿ ಸಂಖ್ಯೆ; 08276-278248, 9901668895 ಅಥವಾ 9449562309 ಇವರನ್ನು ಸಂಪರ್ಕಿಸಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.