ಮಡಿಕೇರಿ, ಆ.23 : ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಗ್ರಾಮಸ್ಥರನ್ನು ಡಾ.ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಶಾಶ್ವತವಾಗಿ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಲೂರು ಗ್ರಾಮಸ್ಥರು, ತಮಗೆ ಕೃಷಿಗೆ ಯೋಗ್ಯವಾದ ಸೂಕ್ತ ಜಾಗವನ್ನು ಒದಗಿಸಿ ಒಕ್ಕಲೆಬ್ಬಿಸಲಿ ಎಂದು ಒತ್ತಾಯಿಸಿದರು.
ತೀವ್ರ ಭೂ ಕುಸಿತಕ್ಕೆ ಒಳಗಾಗಿ ಸಂತ್ರಸ್ತರಾಗಿರುವ ಕಾಲೂರು ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಸರವಾದಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾಲೂರು ಕುಗ್ರಾಮವಾಗಿದ್ದು, ಯುವ ಸಮೂಹ ಕಾಫಿ ತೋಟಗಳು ಸೇರಿದಂತೆ ಕೃಷಿ ಚಟುವಟಿಕೆಗಳ ಮೂಲಕ ನಮ್ಮ ಬದುಕನ್ನು ಹಸನಾಗಿಸಿಕೊಳ್ಳುವ ಹಂತದಲ್ಲೇ ಪ್ರಕೃತಿ ಮುನಿದಿದೆ ಎಂದು ಗ್ರಾಮಸ್ಥ ಐಲಪಂಡ ಪೊನ್ನಪ್ಪ ಅವರು ಕಣ್ಣೀರ್ಗರೆದರು.
ಪರಿಸರವಾದಿಗಳು ಅತಿಯಾದ ಮರಕಡಿತಲೆ, ರೆಸಾರ್ಟ್, ಹೋಂ ಸ್ಟೇಗಳ ನಿರ್ಮಾಣಗಳಿಂದಾಗಿ ಕೊಡಗಿನಲ್ಲಿ ಈ ರೀತಿಯ ಪ್ರಕೃತಿ ವಿಕೋಪ ನಡೆದಿರುವದಾಗಿ ಆರೋಪಿಸುತ್ತಿದ್ದಾರೆ. ಆದರೆ, ಕಾಲೂರು ಗ್ರಾಮದಲ್ಲಿ ಯಾವದೇ ರೆಸಾರ್ಟ್‍ಗಳಾಗಲಿ, ಹೋಂಸ್ಟೇಗಳಾಗಲಿ ತಲೆ ಎತ್ತಿಲ್ಲ. ಜೆಸಿಬಿ ಯಂತ್ರಗಳನ್ನು ಅತಿಯಾಗಿ ಬಳಕೆ ಮಾಡಿಲ್ಲ. ಟಿಂಬರ್ ಲಾಬಿಯಂತೂ ನಡೆದೇ ಇಲ್ಲವೆಂದು ಗ್ರಾಮಸ್ಥರು ಸ್ಪಷ್ಟಪಡಿಸಿದರು.
ಗರ್ವಾಲೆ, ಮಕ್ಕಂದೂರು, ಗಾಳಿಬೀಡು ಪಂಚಾಯ್ತಿಗೆ ಒಳಪಟ್ಟ ಗ್ರಾಮೀಣ ಭಾಗಗಳೇ ಹಾರಂಗಿ ಜಲಾಶಯಕ್ಕೆ ನೀರನ್ನು ಒದಗಿಸುವ ಜಲಾನಯನ ಪ್ರದೇಶಗಳಾಗಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದವರೇ ಈ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಅವರುಗಳು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದ ಜನತೆ ತಲೆತಲಾಂತರದಿಂದ ಬಿಡಿ ಬಿಡಿಯಾಗಿರುವ ಮನೆಗಳಲ್ಲೇ ಜೀವನವನ್ನು ಕಟ್ಟಿಕೊಂಡವರಾಗಿದ್ದು, ಇವರುಗಳಿಗೆ ದಿಡ್ಡಳ್ಳಿ ನಿರಾಶ್ರಿತರ ಮಾದರಿಯಲ್ಲಿ ಕಾಲೋನಿಗಳನ್ನು ನಿರ್ಮಿಸಿದರೆ ಬದುಕು ಅಸಾಧ್ಯ ಎಂದರು. ಕೃಷಿಗೆ ಯೋಗ್ಯವಾದ ಜಮೀನು ಮಂಜೂರು ಮತ್ತು ಮನೆಗಳನ್ನು ನಿರ್ಮಿಸಿ ಸೂಕ್ತ ಪರಿಹಾರವನ್ನು ನೀಡಿದಲ್ಲಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತೇವೆ ಎಂದರು.
ವಲಸೆ ಬಂದಿರುವ ಟಿಬೆಟಿಯನ್ನರಿಗೆ ಪುನರ್ವಸತಿಯನ್ನು ಕಲ್ಪಿಸಿರುವ ಸರ್ಕಾರ, ಇಲ್ಲಿನ ಮೂಲ ನಿವಾಸಿಗಳೇ ಆಗಿರುವ ನಮಗೆ ಅಗತ್ಯ ಪರ್ಯಾಯ ಜಾಗವನ್ನು ಒದಗಿಸಿ ಪುನರ್ವಸತಿ ಕಲ್ಪಿಸಲು ಯೋಜನೆಯನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಸಂತ್ರಸ್ತರ ಹೆಸರಿನಲ್ಲಿ ಪರಿಹಾರದ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ನೈಜ ಸಂತ್ರಸ್ತರಾದ ನಮಗೆ ಅದು ತಲುಪುತ್ತಿಲ್ಲ. ನಮ್ಮ ಹೆಸರಿನಲ್ಲಿ ಇನ್ನಾರೋ ಹಬ್ಬ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನೈಜ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕನಿಷ್ಟ ನ್ಯಾಯಬೆಲೆ ಅಂಗಡಿಗಳ ಮೂಲಕವಾದರೂ ಈ ಸವಲತ್ತುಗಳನ್ನು ಒದಗಿಸಲು ಮುಂದಾದಲ್ಲಿ ಅದು ಅರ್ಹರಿಗೆ ತಲಪಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಹತ್ತು ವರ್ಷಗಳಿಂದೀಚೆಗಷ್ಟೇ ಗ್ರಾಮಕ್ಕೆ ವಿದ್ಯುತ್, ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆÉ. ಆದರೆ, ಇತ್ತೀಚಿನ ಪ್ರಕೃತಿ ವಿಕೋಪ ನಮ್ಮನ್ನು ಶತಮಾನದಷ್ಟು ಹಿಂದಕ್ಕೆ ಕರೆದೊಯ್ದಿದೆ ಎಂದು ದು:ಖಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೊರಿಯನ ರಾಮಚಂದ್ರ, ಸಿದ್ದಂಡ ಡಿ. ಮಾದಪ್ಪ, ಕಳುವಾಜೆ ಪ್ರಸನ್ನ ಕುಮಾರ್, ಕೊಂಬಾರನ ರವಿಕುಮಾರ್ ಹಾಗೂ ಕಾರೇರ ದೇವಯ್ಯ ಉಪಸ್ಥಿತರಿದ್ದರು.