ಮಡಿಕೇರಿ, ಆ. 23 : ಕೊಡಗಿನಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಇಡೀ ಬದುಕನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ವಾಸಿಸಲು ಮನೆ ಮತ್ತು ಬದುಕಿಗಾಗಿ 3 ರಿಂದ 5 ಎಕರೆ ಕೃಷಿ ಭೂಮಿಯನ್ನು ನೀಡಬೇಕೆಂದು ವೀರಾಜಪೇಟೆ ವಿಧಾಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಆಗಿರುವ ಅನಾಹುತಗಳಿಗೆ ಅತಿಯಾದ ಮಳೆ ಕಾರಣವೇ ಹೊರತು ರೆಸಾರ್ಟ್, ಹೋಂಸ್ಟೇ, ಕಾಫಿ ತೋಟಗಳಲ್ಲವೆಂದು ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಬೋಪಯ್ಯ, ಜಿಲ್ಲೆಯ ಮಕ್ಕಂದೂರು, ಶಾಂತಳ್ಳಿ, ಸಂಪಾಜೆ ಹಾಗೂ ಮದೆನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿಯಾಗಿದ್ದು, 2ನೇ ಮೊಣ್ಣಂಗೇರಿ ಗ್ರಾಮವೇ ನಾಶವಾಗಿದೆ ಎಂದರು.

ಬದುಕು ಕಳೆದುಕೊಂಡವರ ಕಣ್ಣೀರು ಒರೆಸಿ ಹೊಸ ಬದುಕು ಕಟ್ಟಿ ಕೊಡುವ ಬದಲು ವಿಶ್ಲೇಷಣೆಗಳ ಮೂಲಕ ಗುಡ್ಡಗಳ ಕುಸಿತಕ್ಕೆ ಕಾರಣಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ನೀಡಲಾಗುತ್ತಿದೆ. ರೆಸಾರ್ಟ್, ಹೋಂಸ್ಟೇ ಹಾಗೂ ಕಾಫಿ ತೋಟಗಳಿಂದ ಗುಡ್ಡ ಕುಸಿತ ಉಂಟಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿರುವದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಜೂನ್ ತಿಂಗಳಿನಲ್ಲಿ ಕೊಡಗು, ಕೇರಳ ಗಡಿಯ ಮಾಕುಟ್ಟ ಪ್ರದೇಶದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಯಿತಲ್ಲದೆ ರಸ್ತೆಗಳೇ ನಾಶವಾದವು. ಆ ಪ್ರದೇಶದಲ್ಲಿ ರೆಸಾರ್ಟ್, ಹೋಂಸ್ಟೆಗಳು ಇದೆಯೇ, ದೃಶ್ಯಮಾಧ್ಯಮಗಳಲ್ಲಿ ಕುಳಿತು ಚರ್ಚೆಯಲ್ಲಿ ತೊಡಗಿರುವವರು ಕೊಡಗಿನ ವಾಸ್ತವಾಂಶವನ್ನು ನೋಡಿದ್ದಾರೆಯೇ ಎಂದು ಬೋಪಯ್ಯ ಪ್ರಶ್ನಿಸಿದರು.

ಪ್ರಸ್ತುತ ವರ್ಷ ಕಾಲೂರು ಭಾಗದಲ್ಲಿ 340 ಇಂಚಿಗೂ ಅಧಿಕ ಮಳೆಯಾಗಿದೆ. ಕೊಡಗಿನ ವಾಡಿಕೆ ಮಳೆಗಾಲದಂತೆ ಆಗಸ್ಟ್ ತಿಂಗಳಿನಲ್ಲಿ ಸುಮಾರು 10-15 ದಿನಗಳ ಕಾಲ ಮಳೆ ಬಿಡುವು ನೀಡುತ್ತಿತ್ತು. ಆದರೆ ಈ ಬಾರಿ ಎಲ್ಲಿಯೂ ಬಿಡುವು ನೀಡದ ಮಳೆ ಧಾರಾಕಾರವಾಗಿ, ನಿರಂತರವಾಗಿ ಸುರಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಬೋಪಯ್ಯ ಅಭಿಪ್ರಾಯಪಟ್ಟರು.

ಒಂದು ತಿಂಗಳ ಹಿಂದೆ ಮಕ್ಕಂದೂರು ಭಾಗದಲ್ಲಿ ಭೂಕಂಪನ ಸಂಭವಿಸಿದಾಗ ಭೂ ವಿಜ್ಞಾನಿಗಳು ಯಾವದೇ ಮುನ್ನೆಚ್ಚರಿಕೆಯ ಸೂಚನೆಗಳನ್ನು ನೀಡಿಲ್ಲ, ಆದರೆ ಅನಾಹುತ ನಡೆದ ನಂತರ ಈ ಪ್ರದೇಶ ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2ನೇ ಮೊಣ್ಣಂಗೇರಿ ಮತ್ತು ಉದಯಗಿರಿ ವ್ಯಾಪ್ತಿಯಲ್ಲಿ ಯಾವದೇ ಹೋಂಸ್ಟೇ, ರೆಸಾರ್ಟ್‍ಗಳಾಗಲಿ ಇಲ್ಲ. ಅಲ್ಲದೆ ಈ ಭಾಗದಲ್ಲಿ ಮರಗಳು ನಾಶವಾಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಇಲ್ಲಸಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗುತ್ತಿದೆ ಎಂದು ಬೋಪಯ್ಯ ಬೇಸರ ವ್ಯಕ್ತÀಡಿಸಿದರು.

2ನೇ ಮೊಣ್ಣಂಗೇರಿ ಹಾಗೂ ಮಂಗಳೂರು ರಸ್ತೆಗಳ ಗ್ರಾಮಗಳ ನಿರಾಶ್ರಿತರಿಗೆ ಅಲ್ಲಿ ಬದುಕು ಸಾಗಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದ್ದು, ಗ್ರಾಮಸ್ಥರ ಸ್ಥಳಾಂತರ ಆಗಲೇಬೇಕಾಗಿದೆ. ಉಳಿದಂತೆ ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಸೇರಿದಂತೆ ಇನ್ನಿತರ ಕೆಲವು ಗ್ರಾಮಗಳ ನಿರಾಶ್ರಿತರಿಗೆ ಅದೇ ಪ್ರದೇಶದಲ್ಲಿರುವ ಸುರಕ್ಷಿತ ಜಮೀನುಗಳನ್ನು ಹಂಚಿಕೆ ಮಾಡಿ ಹೊಸ ಬದುಕನ್ನು ಕಟ್ಟಿಕೊಡಬೇಕು. ಕಂದಾಯ ಭೂಮಿ ಹಾಗೂ ‘ಸಿ’ ಮತ್ತು ‘ಡಿ’ ಭೂಮಿಯನ್ನು ನಿರಾಶ್ರಿತರಿಗೆ 3 ರಿಂದ 5 ಎಕರೆ ಹಂಚಿಕೆ ಮಾಡಿ ಮನೆ ನಿರ್ಮಿಸಿ ಕೊಡಬೇಕೆಂದು ಬೋಪಯ್ಯ ಒತ್ತಾಯಿಸಿದರು.

ಕೇವಲ ಆಶ್ರಯ, ಮನೆ ಅಥವಾ ಕಾಲೋನಿಗಳ ನಿರ್ಮಾಣದಿಂದ ದುಃಖದಲ್ಲಿರುವವರ ಬದುಕು ಹಸನಾಗುವದಿಲ್ಲ. ಕಾಲೋನಿ ಬದುಕಿಗೆ ನಿರಾಶ್ರಿತ ಗ್ರಾಮಸ್ಥರು ಹೊಂದಿಕೊಳ್ಳಲು ಸಾಧ್ಯವಾಗುವದಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂಕಷ್ಟದಲ್ಲಿರುವ ಗ್ರಾಮಗಳಿಗೆ ಸಂಪರ್ಕ ರಸ್ತೆಯ ಅಗತ್ಯವಿದ್ದು, ಇವುಗಳನ್ನು ಜೆಸಿಬಿ ಹಾಗೂ ಇಟಾಚಿ ಯಂತ್ರಗಳ ಮೂಲಕ ನಿರ್ಮಿಸುವ ಕಾರ್ಯ ಆಗಬೇಕಾಗಿದೆ. ಆದರೆ ಸರ್ಕಾರ ಹೆಚ್ಚುವರಿ ಯಂತ್ರಗಳನ್ನು ಕಳುಹಿಸಿಕೊಟ್ಟಿಲ್ಲ, ಅಲ್ಲದೆ ಇಂಜಿನಿಯರಿಂಗ್ ಇಲಾಖೆಗೆ ಅಗತ್ಯ ಸಹಕಾರ ದೊರೆಯುತ್ತಿಲ್ಲ ಎಂದು ಬೋಪಯ್ಯ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯನ್ನು ಅತಿವೃಷ್ಟಿ ಹಾನಿ ಪ್ರದೇಶ ಎಂದು ಘೋಷಿಸುವದರೊಂದಿಗೆ ವಿಶೇಷ ಪ್ಯಾಕೇಜ್‍ನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ, ಮುಕ್ಕೋಡ್ಲು ನಿವಾಸಿ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ತಾವಿದ್ದ ಪ್ರದೇಶದಿಂದ ಗ್ರಾಮಸ್ಥರನ್ನು ಕರೆತಂದ ಭಯಾನಕ ಕ್ಷಣಗಳನ್ನು ವಿವರಿಸಿದರು. ಜಿಲ್ಲೆಯ 32 ಪಂಚಾಯ್ತಿ ವ್ಯಾಪ್ತಿಯಲ್ಲಿ ಅತಿಯಾಗಿ ಹಾನಿಯಾಗಿದ್ದು, ವದಂತಿಗಳನ್ನು ಹಬ್ಬಿಸುತ್ತಿರುವದರಿಂದ ವಿನಾಃಕಾರಣ ಗೊಂದಲ ಸೃಷ್ಟಿಯಾಗುತ್ತಿದೆ. ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ ಎನ್ನುವ ಪರಿಸ್ಥಿತಿ ಜಿಲ್ಲೆಯಲ್ಲಿದ್ದು, ಮಾಧ್ಯಮಗಳು ಸತ್ಯ ಆಧಾರಿತ ವರದಿಗಳನ್ನು ನೀಡಲಿ ಎಂದರು. ನಿರಾಶ್ರಿತರ ಹೆಸರಿನಲ್ಲಿ ಉಳಿದವರು ಹಬ್ಬ ಮಾಡುತ್ತಿದ್ದಾರೆ. ಊಟಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ದಾನ ಮಾಡುವದನ್ನು ನಿಲ್ಲಿಸುವಂತೆ ಮನವಿ ಮಾಡಿದ ಅವರು ಮೊದಲು ಗ್ರಾಮಗಳಿಗೆ ರಸ್ತೆ ಮತ್ತು ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಒತ್ತಾಯಿಸಿದರು.

ನಮ್ಮ ಗ್ರಾಮವನ್ನು ನಾವೇ ಅಭಿವೃದ್ಧಿಪಡಿಸುವ ಶಪಥÀ ಮಾಡುವದಾಗಿ ಇದೇ ಸಂದರ್ಭ ತಿಳಿಸಿದ ರವಿ ಕುಶಾಲಪ್ಪ, ಜಿಲ್ಲೆಯ ಕೃಷಿಕರ ಸಾಲ ಮತ್ತು ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ, ನಗರಾಧ್ಯಕ್ಷ ಮಹೇಶ್ ಜೈನಿ ಹಾಗೂ ಸಂತ್ರಸ್ತ ಸುಭಾಷ್ ಸೋಮಯ್ಯ ಉಪಸ್ಥಿತರಿದ್ದರು.