ಮಡಿಕೇರಿ, ಆ. 27: ಕೊಡಗಿನಲ್ಲಿ ಪ್ರಕೃತ್ತಿ ವಿಕೋಪದಿಂದಾಗಿ 200 ವರ್ಷಗಳ ಇತಿಹಾಸದಲ್ಲಿಯೇ ಕಂಡರಿಯದಂತೆ ಕಾಫಿ ಫಸಲು ನಷ್ಟವಾಗಿದ್ದು ಸುಮಾರು 2500 ಕೋಟಿ ರೂ. ಕಾಫಿ ಮತ್ತು 700 ಕೋಟಿ ರೂ.ಗಳಷ್ಟು ಕರಿಮೆಣಸು ಫಸಲು ನಷ್ಟಕ್ಕೊಳಗಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ ತಿಳಿಸಿದ್ದಾರೆ.ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಮಕ್ಕಂದೂರು, ಮುಕ್ಕೋಡ್ಲು, ಇಗ್ಗೋಡ್ಲು, ಮಾದಾಪುರ ವ್ಯಾಪ್ತಿಯ ಕಾಫಿ ತೋಟಗಳಿಗೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲಿಸಿದ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ, ಕಾಫಿ ಬೆಳೆಯ 200 ವರ್ಷಗಳ ಇತಿಹಾಸದಲ್ಲಿ ನಂಬಲಾಗದಂಥ, ಭೀಕರವಾದ ಭಾರೀ ವಿಕೋಪ ಸಂಭವಿಸಿದೆ. ಈಗಾಗಲೇ ಕಾಫಿ ಮಂಡಳಿಯಿಂದ ಅಧಿಕಾರಿಗಳು ಕೊಡಗು, ಸಕಲೇಶಪುರ ವ್ಯಾಪ್ತಿಯ ವಿವಿಧ ತೋಟಗಳಲ್ಲಿ ಸಂಭವಿಸಿರುವ ಹಾನಿ ಸಂಬಂಧಿತ ಸಮೀಕ್ಷೆ ಕೈಗೊಂಡಿದ್ದಾರೆ. ಸಮೀಕ್ಷೆ ಮುಕ್ತಾಯ ವಾದ ಬಳಿಕವೇ ನಷ್ಟದ ನಿಖರ ಮಾಹಿತಿ ದೊರಕಲಿದೆ. ಆ ಬಳಿಕ ಕೇಂದ್ರ ಸರ್ಕಾರಕ್ಕೆ ಕಾಫಿ ಮಂಡಳಿ ಯಿಂದ ನಷ್ಟ ಪರಿಹಾರ ಪ್ರಸ್ತಾವನೆ ಸಲ್ಲಿಸ ಲಾಗುತ್ತದೆ. ಪ್ರಾಥಮಿಕ ಅಂದಾಜಿನಂತೆ ಕಾಫಿ ಕೃಷಿಗೆ 2,500 ಕೋಟಿ ಮತ್ತು ಕರಿಮೆಣಸು ಕೃಷಿ ಫಸಲು 700 ಕೋಟಿ ರೂ. ನಷ್ಟ ಉಂಟಾಗಿರ ಬಹುದು ಎಂದು ತಿಳಿಸಿದರು.
ರಾಜ್ಯ ಮಾತ್ರವಲ್ಲದೇ ಪಕ್ಕದ ರಾಜ್ಯಗಳಲ್ಲಿನ ಕಾಫಿ ಮಂಡಳಿಯ ವಿಸ್ತರಣಾಧಿಕಾರಿಗಳನ್ನು ಕೊಡಗಿಗೆ ಕಳುಹಿಸಿ ನಷ್ಟ ಸಮೀಕ್ಷೆ ಕೈಗೊಳ್ಳ ಲಾಗುತ್ತಿದೆ. ಶೀಘ್ರದಲ್ಲಿಯೇ ಬೆಂಗಳೂರಿನ ಕಾಫಿ ಮಂಡಳಿ ಕೇಂದ್ರ ಕಛೇರಿಯಲ್ಲಿ ಕಾಫಿ ಕೃಷಿ ಜಿಲ್ಲೆಗಳಿಗೆ ಸಂಬಂಧಿಸಿದ ಸಂಸದರು, ಶಾಸಕರು, ಜನಪ್ರತಿನಿಧಿಗಳ ಸಭೆ ನಡೆಸಿ ಮುಂದಿನ ಪರಿಹಾರ ಕ್ರಮಗಳ ಬಗ್ಗೆ ತೀರ್ಮಾನಿಸ ಲಾಗುತ್ತದೆ ಎಂದು ಬೋಜೇಗೌಡ ಮಾಹಿತಿ ನೀಡಿದರು.
(ಮೊದಲ ಪುಟದಿಂದ) ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಭೂಹಾನಿ ಮತ್ತು ಕೃಷಿ ಫಸಲು ಹಾನಿಯ ಕುರಿತಂತೆ ಪ್ರತ್ಯೇಕ ಸಮೀಕ್ಷೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ ಬೋಜೇಗೌಡ, ಈ ದುರಂತ ಕಾಫಿ ಕೃಷಿಯ ಇತಿಹಾಸದಲ್ಲಿಯೇ ಸಂಭವಿಸಿರುವ ದೊಡ್ಡ ದುರಂತ ಎಂದು ವಿಷಾದಿಸಿದರು. ಕಾಫಿ ಕೃಷಿಕರಿಗೆ ಎಲ್ಲಾ ರೀತಿಯ ನೆರವು ನೀಡಲು ಕಾಫಿ ಮಂಡಳಿ ಬದ್ಧವಾಗಿದೆ ಎಂದೂ ಅವರು ಭರವಸೆ ನೀಡಿದರು.
ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಟಿ.ಪ್ರಮೋದ್ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಧಿಕ ಕಾರ್ಮಿಕರು ಕಾಫಿ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಈಗ ಸಂಭವಿಸಿರುವ ಹಾನಿಯಿಂದಾಗಿ ಭಾರತೀಯ ಕಾಫಿ ಉದ್ಯಮವೂ ಕಂಗೆಡುವಂತಾಗಿದೆ. ಕೇಂದ್ರ ಸರ್ಕಾರ ಕಾಫಿ ಬೆಳೆಗಾರರು ಈ ವರ್ಷದ ಮಾರ್ಚ್ 31 ರೊಳಗಾಗಿ ಮಾಡಿರುವ ಎಲ್ಲಾ ರೀತಿಯ ಸಾಲ, ಅಸಲನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಪ್ರಕೃತಿ ವಿಕೋಪದ ಸಂಸ್ರಸ್ತರಿಗೆ ಸಾಲ ಮತ್ತು ಬಡ್ಡಿ ಕಟ್ಟಲೂ ಅಸಾಧ್ಯವಾದಂಥ ಸ್ಥಿತಿಯಿದ್ದು, ಅತ್ಯಧಿಕ ತೆರಿಗೆ ಮತ್ತು ಆದಾಯವನ್ನು ದೇಶಕ್ಕೆ ನೀಡಿರುವ ಕಾಫಿ ಉದ್ಯಮ ಹಾಗೂ ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ದೇಶದಲ್ಲಿಯೇ ಕೊಡಗು ಅತ್ಯುತ್ತಮವಾದ ಕಾಫಿ ಬೆಳೆ ಪ್ರದೇಶವಾಗಿದ್ದು, ಗುಣಮಟ್ಟ ಮತ್ತು ಅತ್ಯಧಿಕ ಫಸಲನ್ನು ಇಲ್ಲಿ ಬೆಳೆಯ ಲಾಗುತ್ತಿದೆ. ಹೀಗಿರುವಾಗ ಕೊಡಗಿನ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಎಲ್ಲರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಉದ್ಯಮದ ರಕ್ಷಣೆಗೆ ಮುಂದಾಗುವಂತೆಯೂ ಪ್ರಮೋದ್ ಕರೆ ನೀಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾಬೆಳ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಸಂಭವಿಸಿರುವ ಭೂಕುಸಿತಕ್ಕೆ ಹಾರಂಗಿ ಅಣೆಕಟ್ಟಿನ ಹಿನ್ನೀರನ್ನು ಸೂಕ್ತ ಕಾಲದಲ್ಲಿ ನದಿಗೆ ಬಿಡದಿರುವದೇ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಹಾರಂಗಿ ಅಣೆಕಟ್ಟು ಭರ್ತಿಯಾಗಿದ್ದರೂ ಸಕಾಲದಲ್ಲಿ ನೀರನ್ನು ಹೊರಕ್ಕೆ ಬಿಡದೇ ದಿಢೀರಾಗಿ ಬಿಟ್ಟುದುದರಿಂದ ಹಿನ್ನೀರು ಹಲವಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿನ ಬೆಟ್ಟ ಪ್ರದೇಶಗಳಿಗೆ ನುಗ್ಗಿ ಮಣ್ಣು ಕುಸಿಯಲಾರಂಭಿಸಿತು. ಇಂಥ ಬೇಜವಬ್ದಾರಿಯಿಂದಾಗಿಯೇ ಇಂಥದ್ದೊಂದು ಭಾರೀ ದುರಂತ ಸಂಭವಿಸಿದೆ. ಈ ಬಗ್ಗೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ದಾಗಿಯೂ ನಂದಾ ಬೆಳ್ಯಪ್ಪ ಮಾಹಿತಿ ನೀಡಿದರು.
ನಷ್ಟಕ್ಕೊಳಗಾದ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ವೈಜ್ಞಾನಿಕವಾಗಿ ಕೃಷಿ ಭೂಮಿಯ ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳೆ ಬೆಳೆಯಬಹುದು ಎಂದು ತಜ್ಞರು ಕೃಷಿಕರಿಗೆ ಸಲಹೆ ನೀಡಬೇಕೆಂದೂ ಒತ್ತಾಯಿಸಿದರು.
ಸಂಕಷ್ಟಕ್ಕೊಳಗಾದ ಇಗ್ಗೋಡ್ಲು ಗ್ರಾಮದ ಬೆಳೆಗಾರ ಮತ್ತು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಾರ್ಯಪ್ಪ ಮಾತನಾಡಿ, ಹಿಂದೆಂದೂ ಕಂಡರಿಯದಷ್ಟು ಮಳೆ ಈ ವರ್ಷ ಬಿದ್ದ ಹಿನ್ನೆಲೆಯಲ್ಲಿ ಸಂಭವಿಸಿರುವ ದುರಂತಕ್ಕೆ ಸರ್ಕಾರ ಸಕಾಲದಲ್ಲಿ ಸ್ಪಂದಿಸಿ ಬೆಳೆಗಾರರಿಗೆ ನೆರವಾಗುವಂತೆ ಒತ್ತಾಯಿಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ವಕ್ತಾರ ಕೆ.ಕೆ.ವಿಶ್ವನಾಥ್ ಮಾಹಿತಿ ನೀಡಿ, ಈ ಮೊದಲೇ ಕಾಫಿ ಕೃಷಿಕರು ಸಂಕಷ್ಟದಲ್ಲಿದ್ದು ಪರಿಹಾರ ಕೈಗೊಳ್ಳುವಂತೆ ಬೆಳೆಗಾರ ಸಂಘಟನೆಗಳು ಕೇಂದ್ರದ ವಾಣಿಜ್ಯ ಸಚಿವಾಲಯಕ್ಕೆ ಮನವಿ ಮಾಡುತ್ತಲೇ ಬಂದಿದ್ದೆವು. ಇದೀಗ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಗಾಯದ ಮೇಲೆ ಬರೆಯಂತೆ ಮತ್ತೊಂದು ಮಹಾದುರಂತದ ಬಿಸಿ ತಟ್ಟಿದೆ ಎಂದರು.
ಕಾಫಿ ಮಂಡಳಿ ಸದಸ್ಯ ಉದಯ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.