ಮಡಿಕೇರಿ, ಆ. 27: ಕಾಲೂರು ಗ್ರಾಮದ ಹೊಳೆಯಲ್ಲಿ ಗಗನ್ ಗಣಪತಿ ಎಂಬ ಏಳು ವರ್ಷದ ಬಾಲಕ ಹೆತ್ತಾಕೆಯ ಕೈಜಾರಿ ನೀರು ಪಾಲಾಗಿದ್ದಾರೆ ಎಂದು ಪೊಲೀಸ್ ದೂರು ಪ್ರಕರಣ ಸುಳ್ಳಿನೊಂದಿಗೆ ಕಟ್ಟುಕತೆಯಾಗಿದೆ ಎಂದು ಬಹಿರಂಗಗೊಂಡಿದೆ. ಪ್ರಾಕೃತಿಕ ವಿಕೋಪದಿಂದ ಮಡಿದವರಿಗೆ 5 ಲಕ್ಷ ರೂ. ಪರಿಹಾರ ಸಿಗುತ್ತದೆ ಎಂಬ ದುರುದ್ದೇಶದಿಂದ ಮಹಿಳೆಯೊಬ್ಬಳು ಕಟ್ಟುಕತೆಯೊಂದಿಗೆ ಈ ರೀತಿ ನಡೆದುಕೊಂಡಿದ್ದಾಗಿದೆ.ಕಾಲೂರು ಗ್ರಾಮದವರೆಂದು ಹೇಳಿಕೊಂಡಿರುವ ಸೋಮಶೇಖರ್ ಮತ್ತು ಸುಮ ಪೊಲೀಸ್ ಪುಕಾರು ನೀಡಿ ತಮ್ಮ ಮಗ ಹೊಳೆಯಲ್ಲಿ ಕೈಜಾರಿ ಕೊಚ್ಚಿಹೋದುದ್ದಾಗಿ ಅಳಲು ತೋಡಿಕೊಂಡಿದ್ದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ರಾಗಿರುವ ನೀಲಮಣಿ ರಾಜು, ಜಿಲ್ಲಾ ಭೇಟಿ ಸಂದರ್ಭ ತಾ. 24 ರಂದು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿ, ಬಾಲನ ಶೋಧಕ್ಕೆ ಸೂಚಿಸಿದ್ದರು.ಆ ಮೇರೆಗೆ ಪೊಲೀಸರು ತನಿಖೆಯೊಂದಿಗೆ ದೂರುದಾರದಿಂದ ಪೂರ್ವಾಪರ ವಿಚಾರಿಸಲಾಗಿ ಇದೊಂದು ಕಟ್ಟುಕತೆ ಎಂಬದು ಸಾಬೀತಾಗಿದೆ. ಪೊಲೀಸ್ ದೂರು ಸಲ್ಲಿಸಿರುವ ಸೋಮಶೇಖರ್ ಹಲವು ವರ್ಷಗಳ ಹಿಂದೆ ತನ್ನ ಪತ್ನಿ ದೇವಿ ಎಂಬಾಕೆಯನ್ನು ಮಕ್ಕಳಾದ ಸಾವಿತ್ರಿ ಹಾಗೂ ರಕ್ಷಿತಾ ಸಹಿತ ತೊರೆದಿ ರುವದು ದೃಢಪಟ್ಟಿದೆ.
(ಮೊದಲ ಪುಟದಿಂದ) ಇತ್ತ ರಮೇಶ್ ಎಂಬಾತನ ಪತ್ನಿಯಾಗಿದ್ದ ದೂರುದಾರಳಾದ ಸುಮ ಕೂಡ, ತನ್ನ ಗಂಡನೊಂದಿಗೆ 8 ವರ್ಷಗಳ ಹಿಂದೆಯೇ ಮಕ್ಕಳಾದ ಗಗನ್ ಗಣಪತಿ ಹಾಗೂ ಮುತ್ತಪ್ಪ ಎಂಬಿಬ್ಬರನ್ನು ತೊರೆದಿರುವದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅಲ್ಲದೆ ಪತಿಯನ್ನು ತೊರೆದಿರುವ ಸುಮ ಹಾಗೂ ಪತ್ನಿಯನ್ನು ತ್ಯಜಿಸಿರುವ ಸೋಮಶೇಖರ್ ಪ್ರತ್ಯೇಕ ಸಂಸಾರ ಹೂಡಿದ್ದು, ಮಡಿಕೇರಿಯಲ್ಲಿ ವಾಸಿಸುತ್ತಿದ್ದಾರೆ ಕಾರ್ಮಿಕರಾಗಿದ್ದಾರೆ. ಸೋಮಶೇಖರ್‍ಗೆ ಸುಮಾ ಸಂಬಂಧಿತವಾಗಿ ಮಕ್ಕಳಿಲ್ಲವೆಂದು ತನಿಖೆಯಿಂದ ದೃಢಪಟ್ಟಿದ್ದು, ಬಾಲಕ ನೀರುಪಾಲಾದ ಪ್ರಕರಣ ಸುಖಾಂತ್ಯ ಕಂಡಿರುವದಾಗಿ ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ‘ಶಕ್ತಿ’ ಸಂಪರ್ಕಿಸಿದಾಗ ಸ್ಪಷ್ಟಪಡಿಸಿದ್ದಾರೆ.