ಮಡಿಕೇರಿ, ಆ.27 : ಸೈನಿಕರ ಜಿಲ್ಲೆ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ್ದ ಸಂದರ್ಭ ಅವಮಾನವಾಗುವ ಘಟನೆಗಳು ನಡೆದಿದ್ದು, ರಾಜಕೀಯ ಕಾರಣಕ್ಕಾಗಿ ಈ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿದೆ ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂ ವಿಷಾದ ವ್ಯಕ್ತಪಡಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಸಂಚಾಲಕ ನಿವೃತ್ತ ಮೇಜರ್ ಬಿ.ಎ.ನಂಜಪ್ಪ ಹಾಗೂ ಉಳ್ಳಿಯಡ ಎಂ.ಪೂವಯ್ಯ ಕೊಡಗಿನ ಕೆಲವು ಭಾಗಗಳಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಸಮೀಕ್ಷೆಗೆ ರಕ್ಷಣಾ ಸಚಿವರು ಬಂದಿದ್ದಾಗ ವಿನಾಕಾರಣ ವಿವಾದ ಹುಟ್ಟಿಕೊಂಡಿದ್ದು, ಇದರಲ್ಲಿ ರಕ್ಷಣಾ ಸಚಿವರ ತಪ್ಪಿಲ್ಲವೆಂದು ಸ್ಪಷ್ಟಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರವೂ ಇದರಲ್ಲಿ ಇಲ್ಲವೆಂದು ಸಮರ್ಥಿಸಿಕೊಂಡ ಅವರು, ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಉಸ್ತುವಾರಿ ಸಚಿವರ ಹಾದಿ ತಪ್ಪಿಸಿದ್ದಾರೆ ಎಂದು ಟೀಕಿಸಿದರು. ಸೇನೆಯ ನಿವೃತ್ತ ಅಧಿಕಾರಿಗಳು ಹಾಗೂ ನಿವೃತ್ತ ಯೋಧರ ಬಗ್ಗೆ ರಕ್ಷಣಾ ಸಚಿವರು ಹೆಚ್ಚಿನ ಕಾಳಜಿ ತೋರಿ ರಕ್ಷಣಾ ಸಚಿವರು ಸಭೆ ನಡೆಸಿದರು. ಯೋಧರ ಸಮಸ್ಯೆಗಳನ್ನು ಆಲಿಸಿದ ನಂತರ ಪ್ರಕೃತಿ ವಿಕೋಪ ಮತ್ತು ಪರಿಸರದ ಬಗ್ಗೆ ಚರ್ಚಿಸಿದರು. ಈ ಕಾರಣಕ್ಕಾಗಿ ಅಲ್ಲಿದ್ದ ಕೆಲವು ಚುನಾಯಿತ ಜನಪ್ರತಿನಿಧಿಗಳು ವಿಚಲಿತಗೊಂಡಿದ್ದೇ
(ಮೊದಲ ಪುಟದಿಂದ) ಗೊಂದಲ ಸೃಷ್ಟಿಗೆ ಕಾರಣವಾಗಿದೆ. ರಕ್ಷಣಾ ಸಚಿವರು ಅಂದು ತೆಗೆದುಕೊಂಡ ನಿಲುವನ್ನು ಕೊಡಗಿನ ಮಾಜಿ ಸೈನಿಕರ ಸಂಘ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಬೆಂಬಲಿಸಲಿದೆ. ಸಚಿವರುಗಳು, ರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ವಿವಾದ ಕೇವಲ ಕಾಲ್ಪನಿಕ ಮತ್ತು ರಾಜಕೀಯ ಪ್ರೇರಿತ ಎಂದು ಬಿ.ಎ.ನಂಜಪ್ಪ ಆರೋಪಿಸಿದರು.
ಕೊಡಗಿನಂತಹ ಪುಟ್ಟ ಜಿಲ್ಲೆಗೆÀ ರಕ್ಷಣಾ ಸಚಿವರು ಭೇಟಿ ನೀಡುತ್ತಿರುವದಾಗಿ ಮಾಹಿತಿ ತಿಳಿಯುತ್ತಿದ್ದಂತೆ ಲಭ್ಯವಿದ್ದ ಅಲ್ಪ ಸಮಯದಲ್ಲೇ ಜಿಲ್ಲಾಧಿಕಾರಿಗಳು ಸಚಿವರ ಕಾರ್ಯಕ್ರಮದ ವೇಳಾಪಟ್ಟಿ ತಯಾರಿಸಿದ್ದಾರೆ. ಅದನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಅಗತ್ಯ ಮಾರ್ಪಾಡುಗಳನ್ನೂ ಮಾಡಿದ್ದಾರೆ. ಅದರಂತೆ ರಕ್ಷಣಾ ಸಚಿವರ ಕಾರ್ಯಕ್ರಮದ ಪಟ್ಟಿಯಲ್ಲಿ ಆ.24ರಂದು 11 ಗಂಟೆಗೆ ನಿವೃತ್ತ ಸೇನಾನಿಗಳ ಹಾಗೂ ಅಧಿಕಾರಿಗಳ ಭೇಟಿ ಮತ್ತು ಅವರೊಡನೆ ಸಂವಾದವೂ ಸೇರ್ಪಡೆಯಾಗಿತ್ತು. ಈ ಸಂವಾದ ಕಾರ್ಯಕ್ರಮದಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ನೀಡಿದ ಮಾದರಿಯಲ್ಲೇ ಗೋಣಿಕೊಪ್ಪಲುವಿನಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ-ಜನರಲ್ ತಿಮ್ಮಯ್ಯ ಸ್ಮಾರಕಕ್ಕೂ ಯುದ್ಧ ಟ್ಯಾಂಕ್ ಒಂದನ್ನು ನೀಡುವಂತೆ ಕೋರುವದು ನಮ್ಮ ಸಂಘಟನೆಯ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಕೊಡಗಿನ ಪರಿಸರದ ಬಗ್ಗೆ ನಿಮ್ಮದೇನಾದರೂ ಸಲಹೆಗಳಿದ್ದರೆ ನೀಡುವಂತೆ ರಕ್ಷಣಾ ಸಚಿವರು ಕೋರಿದ ಮೇರೆಗೆ ತಾವುಗಳು ಕಸ್ತೂರಿರಂಗನ್ ವರದಿ ಜಾರಿಯ ಬಗ್ಗೆ ಕೆಲವು ಮಾಹಿತಿಗಳನ್ನು ಅವರಿಗೆ ನೀಡುತ್ತಿದ್ದೆವು. ಇದು ಅಲ್ಲಿದ್ದ ಕೆಲವು ಜನಪ್ರತಿನಿಧಿಗಳ ಅಸಮಾಧಾನಕ್ಕೆ ಕಾರಣವಾಗಿರಬಹುದೆಂದು ಅಭಿಪ್ರಾಯಪಟ್ಟರು.
ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ನಿವೃತ್ತ ಸೇನಾಧಿಕಾರಿಗಳ ಬಗ್ಗೆ ಲಘುವಾಗಿ ಮಾತನಾಡಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನಂಜಪ್ಪ ಅವರು, ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವವರ ನೆರವಿವಾಗಿ ನಿವೃತ್ತ ಸೇನಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಸಹಕಾರ ನೀಡಿದ್ದಾರೆ, ಆದರೆ ಎಲ್ಲಿಯೂ ಪ್ರಚಾರ ಬಯಸಿಲ್ಲ ಎಂದು ಸ್ಪಷ್ಟಪಡಿಸಿದರು.
ನಿವೃತ ಸೇನಾನಿಗಳ ಪ್ರಯತ್ನದಿಂದ ಸುಮಾರು ಎರಡು ಲೋಡುಗಳಷ್ಟು ಪರಿಹಾರ ಸಾಮಗ್ರಿ ಜಿಲ್ಲೆಗೆ ರವಾನೆಯಾಗಿದ್ದು, ಇದನ್ನು ಸೇವಾ ಭಾರತಿ ಸಂಚಾಲಿತ ಪುನರ್ವಸತಿ ಕೇಂದ್ರಕ್ಕೆ ನೀಡಲಾಗಿದೆ. ಇದರೊಂದಿಗೆ ಸೋಲಾರ್ ದೀಪಗಳನ್ನು ಒದಗಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಫಿನಾಯಿಲ್, ಔಷಧಿಯುಕ್ತ ಸಾಬೂನು ಮುಂತಾದವುಗಳನ್ನು ಸಂಗ್ರಹಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಜಿಲ್ಲೆಗೆ ಸರಬರಾಜಾಗಲಿದೆ ಎಂದು ಮೇಜರ್ ಬಿ.ಎ.ನಂಜಪ್ಪ ಹಾಗೂ ಉಳ್ಳಿಯಡ ಎಂ.ಪೂವಯ್ಯ ಮಾಹಿತಿ ನೀಡಿದರು.
ರಸ್ತೆ ನಿರ್ಮಾಣಕ್ಕೆ ನೆರವು
ಇದರೊಂದಿಗೆ ತೀವ್ರ ಹಾನಿಗೊಳಗಾಗಿರುವ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳನ್ನು ಕಡಿಮೆ ಅವಧಿಯಲ್ಲಿ ಯಾವ ರೀತಿಯಲ್ಲಿ ನಿರ್ಮಿಸಬಹುದೆಂಬುದರ ಬಗ್ಗೆ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸೇನಾಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಕಾಶ್ಮೀರ, ಚೀನಾ ಗಡಿ ಪ್ರದೇಶ ಸೇರಿದಂತೆ ದುರ್ಗಮ ಪ್ರದೇಶಗಳಲ್ಲಿ ಈಗಾಗಲೇ ಸಾಕಷ್ಟು ರಸ್ತೆಗಳನ್ನು ನಿರ್ಮಿಸಿ ಅನುಭವ ಇರುವ ಭಾರತೀಯ ರಕ್ಷಣಾ ಇಲಾಖೆಯ ಗ್ರಿಫ್ ವಿಭಾಗದ ದೆಹಲಿಯ ಕರ್ನಲ್ ಮೂರ್ತಿ ಅವರನ್ನು ಕೊಡಗಿಗೆ ಆಹ್ವಾನಿಸಲಾಗಿದೆ. ಒಂದೆರಡು ದಿನಗಳಲ್ಲಿ ಅವರು ಕೂಡ ಜಿಲ್ಲೆಗೆ ಆಗಮಿಸಿ ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ ಎಂದು ನಂಜಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಫೋರಂನ ನಿರ್ದೇಶಕ ಮಾರ್ಚಂಡ ಗಣೇಶ್ ಪೊನ್ನಪ್ಪ, ಉಪಸ್ಥಿತರಿದ್ದರು.