ಮಡಿಕೇರಿ, ಆ. 27: ಇತಿಹಾಸದಲ್ಲಿ ಕಂಡರಿಯದ ಭಯಾನಕ ಅತಿವೃಷ್ಟಿಯಿಂದ ತತ್ತರಿಸಿ ಹೋಗಿರುವ ಜಿಲ್ಲೆಯ ಜನತೆಗೆ, ಕರ್ನಾಟಕದ ವಿವಿಧೆಡೆಗಳಿಂದ ಸಂತರು ಆಗಮಿಸಿ ಸಂತೈಸುವ ಮೂಲಕ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಡಾ. ನಿರ್ಮಲಾನಂದ ಶ್ರೀಗಳು, ಚಿತ್ರದುರ್ಗ ಮುರುಘ ಮಠದ ಡಾ. ಶಿವಮೂರ್ತಿ ಮುರುಘ ಶರಣರು ಭೇಟಿ ನೀಡಿ ನೊಂದವರನ್ನು ಸಂತೈಸುತ್ತಿದ್ದು, ಇಂದು ಮುರುಘ ಶರಣರು ಇಲ್ಲಿನ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದ ಸೇವಾ ಭಾರತಿ ಪರಿಹಾರ ಕೇಂದ್ರ ಹಾಗೂ ಪೊಲೀಸ್ ಮೈತ್ರಿ ಭವನದಲ್ಲಿ ಉಳಿದುಕೊಂಡಿರುವ ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಆತ್ಮಸ್ಥೈರ್ಯ ತುಂಬಿದರು.ಆಸರೆಯ ಭರವಸೆ : ಸಂತ್ರಸ್ತರ ಕೇಂದ್ರಗಳಲ್ಲಿ ಹಾಗೂ ಜಿಲ್ಲೆಯ ಇತರೆಡೆಗಳಲ್ಲಿ ಪ್ರಾಕೃತಿಕ ವಿಕೋಪ ದಿಂದ ಸೂರು ಕಳೆದುಕೊಂಡು, ವಿದ್ಯಾಭ್ಯಾಸಕ್ಕೆ ತೊಂದರೆಗೆ ಒಳಗಾಗಿರುವ ವಿದ್ಯಾರ್ಥಿಗಳಿದ್ದರೆ ಅಂತಹವರಿಗೆ ಮತ್ತು ವೃದ್ಧರಿಗೆ ಶ್ರೀಗಳು ಆಸರೆಯ ಭರವಸೆ ನೀಡಿದರು. ಸಂತ್ರಸ್ತರ ದುಃಖದುಮ್ಮಾನ ಆಲಿಸಿದ ಅವರು, ಧೃತಿಗೆಡದಂತೆ ತಿಳಿಹೇಳಿದರು. ಅಲ್ಲದೆ ಚಿತ್ರದುರ್ಗ ಮಠಕ್ಕೆ ಸಂಬಂಧಿಸಿರುವ ಸೋಮವಾರಪೇಟೆ ಬಳಿಯ ಬೇಳೂರು ಮಠದಿಂದ ಸಂತ್ರಸ್ತರಿಗೆ ಅಗತ್ಯ ನೆರವಿನ ಭರವಸೆ ನೀಡಿದರು. ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಸ್ವಾಮೀಜಿ, ಕೊಡಗಿನ ಇತಿಹಾಸದಲ್ಲಿ ಕಂಡರಿಯದಷ್ಟು ಸಮಸ್ಯೆ ಎದುರಾಗಿರುವಾಗ ಸಮಾಜ, ಸರಕಾರದೊಂದಿಗೆ ಸಂತರು ಜತೆಗಿರುವದಾಗಿ ನುಡಿದರು.

ಜಿಲ್ಲೆಯ ವಿವಿಧೆಡೆಗಳಲ್ಲಿ ನೊಂದವರನ್ನು ಭೇಟಿಯಾಗಿ ಆತ್ಮವಿಶ್ವಾಸ ತುಂಬುವದರೊಂದಿಗೆ ಮಠದಿಂದ ಸಾಧ್ಯವಿರುವಷ್ಟು ಎಲ್ಲ ನೆರವು ಕಲ್ಪಿಸಲಾಗುವದು ಎಂದ ಅವರು, ಬೇಳೂರು ಮಠದ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ ಮತ್ತು ಹಿರಿಯರಿಗೆ ವೃದ್ಧಾಶ್ರಮದಲ್ಲಿ ಆಸರೆ ನೀಡಲಾಗುತ್ತಿದ್ದು, ಫಲಾನುಭವಿಗಳು ಅಲ್ಲಿ ಸಂಪರ್ಕಿಸಲು ಸಲಹೆ ನೀಡಿದರು. ಸ್ವಾಮೀಜಿ ಭೇಟಿ ಸಂದರ್ಭ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಹಾವೇರಿ ಘಟಕದ ಪ್ರಜ್ವಲ್ ಹಾಗೂ ಇತರರು ಹಾಜರಿದ್ದರು.

ಇಂದು ಮುಕ್ತಾಯ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾಭಾರತಿ ಘಟಕದಿಂದ ತಾ. 16 ರಿಂದ ಇಂದಿನ ತನಕ ನಡೆಸಿರುವ ಸೇವಾ ಕೇಂದ್ರದಲ್ಲಿ 183 ಕುಟುಂಬಗಳ 560 ಮಂದಿ ಆಸರೆ ಪಡೆದಿದ್ದು, ಜಿಲ್ಲಾಡಳಿತಕ್ಕೆ ಈ ಸಂತ್ರಸ್ತರನ್ನು ತಾ. 28 (ಇಂದಿನಿಂದ) ಸ್ಥಳಾಭಾವ ಹಿನ್ನೆಲೆ ಹಸ್ತಾಂತರಿಸುತ್ತಿರುವದಾಗಿ ಆರ್‍ಎಸ್‍ಎಸ್ ಮಂಗಳೂರು ವಿಭಾಗ ಪ್ರಚಾರಕ್ ಉಮೇಶ್ ‘ಶಕ್ತಿ’ಗೆ ತಿಳಿಸಿದರು.