ಗೋಣಿಕೊಪ್ಪಲು, ಆ. 27: ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯ ಪೋಷಕರ ಹಾಗೂ ಜನಪ್ರತಿನಿಧಿಗಳ ಸಭೆಯು ನಿಲಯದ ಸಭಾಂಗಣದಲ್ಲಿ ಜರಗಿತು.ಸಭೆಗೆ ತಾಲೂಕಿನ ಜಿ.ಪಂ.ಸದಸ್ಯರು, ತಾ.ಪಂ.ಅಧ್ಯಕ್ಷರು ಸೇರಿದಂತೆ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಬಹುತೇಕ ಪೋಷಕರು ಆಗಮಿಸಿದ್ದರು.

ಜಿಲ್ಲಾ ಪಂಚಾಯ್ತಿನ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಿರಣ್ ಕಾರ್ಯಪ್ಪನವರು ಅಧಿಕಾರ ವಹಿಸಿಕೊಂಡ ಎರಡು ತಿಂಗಳಲ್ಲಿ ವಸತಿ ನಿಲಯದಲ್ಲಿ ಇರುವ ವಿದ್ಯಾರ್ಥಿಗಳ ಪೋಷಕರ ಸಭೆ ಆಯೋಜಿಸುವ ಮೂಲಕ ಕ್ರೀಡಾ ನಿಲಯದಲ್ಲಿ ಬದಲಾವಣೆ ತರುವ ಪ್ರಯತ್ನ ನಡೆಸಿದರು.

ಸಭೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಹಲವು ಸಮಸ್ಯೆಗಳನ್ನು ಅಧ್ಯಕ್ಷರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು.ನಿಲಯದಲ್ಲಿ ವಿದ್ಯಾರ್ಥಿ ಗಳಿಗೆ ಸವಲತ್ತು ವಿತರಣೆ ಹಾಗೂ ಮೂಲಭೂತ ಸೌಲಭ್ಯದ ಕೊರತೆ, ಹಾಕಿ ತರಬೇತುದಾರರ ಬದಲಾವಣೆಗೆ ಒತ್ತಾಯ ಕೇಳಿ ಬಂತು.

ಪ್ರತಿ ವಿದ್ಯಾರ್ಥಿಗಳ ಪೋಷಕರ ಅಹವಾಲುಗಳನ್ನು ಆಲಿಸಿದ ಅಧ್ಯಕ್ಷ ಕಿರಣ್ ಕಾರ್ಯಪ್ಪ ಮುಂದಿನ ದಿನದಲ್ಲಿ ಕ್ರೀಡಾ ನಿಲಯದ ವ್ಯವಸ್ಥೆಗಳನ್ನು ಬದಲಾಯಿಸಿ ವಿದ್ಯಾರ್ಥಿಗಳ ಹಿತವನ್ನು ಕಾಪಾಡಲು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ. ಸರ್ಕಾರದ ನಿಯಮದಡಿಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳನ್ನು ಚಾಚು ತಪ್ಪದೇ ತಲಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಪೋಷಕರಿಗೆ ಭರವಸೆ ನೀಡಿದರು.

ಕಳೆದ ಹಲವಾರು ವರ್ಷಗಳಿಂದ ಕ್ರೀಡಾ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ತರಬೇತುದಾರರಾದ ಚಂಗಪ್ಪ ಹಾಗೂ ಸುಬ್ಬಯ್ಯ ಅವರು ಉತ್ತಮವಾಗಿ ತರಬೇತಿ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಇಲಾಖೆ ವತಿಯಿಂದ ಬೇರೆ ಜಿಲ್ಲೆಯ ಸುರೇಶ್ ಹಾಗೂ ರಾಹುಲ್ ಕಡಿಗೆÉ ಎಂಬವರನ್ನು ನೇಮಕ ಮಾಡಲಾಗಿದೆ. ಸರ್ಕಾರದಿಂದ ನಿಯೋಜನೆ ಗೊಂಡಿರುವ ತರಬೇತಿದಾರರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಬೇತಿ ನೀಡುತ್ತಿಲ್ಲ. ವಾರದಲ್ಲಿ ಎರಡು ದಿನ ಮಾತ್ರ ನಿಲಯದಲ್ಲಿ ರುತ್ತಾರೆ.ಉಳಿದ ಸಮಯದಲ್ಲಿ ಬೆಂಗಳೂರಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಕ್ರೀಡಾ ಭವಿಷ್ಯ ರೂಪಿಸಿಕೊಳ್ಳುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಆದುದರಿಂದ ಈ ಹಿಂದಿನಿಂದಲೂ ಸ್ಥಳೀಯವಾಗಿ ಅನುಭವವಿದ್ದು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚಂಗಪ್ಪ ಹಾಗೂ ಸುಬ್ಬಯ್ಯ ಅವರನ್ನು ಮುಂದುವರೆಸಬೇಕೆಂದು ಸಭೆಯಲ್ಲಿದ್ದ ಪೋಷಕರು ಒಮ್ಮತದಿಂದ ತಮ್ಮ ತೀರ್ಮಾನವನ್ನು ಸಭೆಗೆ ತಿಳಿಸಿದರು.

ಪೋಷಕರ ಮಾತಿಗೆ ಉತ್ತರಿಸಿದ ಅಧ್ಯಕ್ಷ ಕಿರಣ್ ಕಾರ್ಯಪ್ಪ ನಾನು ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆಯುತ್ತ ಬಂದಿದೆ. ಈಗಾಗಲೇ ವಸತಿ ನಿಲಯಕ್ಕೆ ನಾಲ್ಕು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈ ಕಾರಣಕ್ಕೆ ಕಾಣದ ಕೈಗಳು ಬೆದರಿಕೆಯ ಪತ್ರಗಳನ್ನು ಕಳುಹಿಸಿದ್ದಾರೆ. ಇಲ್ಲಿಯ ವ್ಯವಸ್ಥೆಗಳನ್ನು ಬದಲಾಯಿಸಿ ಮಕ್ಕಳ ಭವಿಷ್ಯವನ್ನು ರೂಪಿಸುವ ತೀರ್ಮಾನ ಕೈಗೊಂಡಿದ್ದೇನೆ. ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿಯೇ ಈ ಕ್ರೀಡಾ ನಿಲಯವು ಇರುವದರಿಂದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಈಗಾಗಿ ಈ ಭಾಗದ ಜನಪ್ರತಿನಿಧಿಗಳ ಹಾಗೂ ಪೋಷಕರ ನಡುವೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ತೀರ್ಮಾನ ಕೈಗೊಂಡಿದ್ದೇನೆ. ಪೋಷಕರ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ್ದೇನೆ. ಈ ಹಿಂದಿನ ಸಮಸ್ಯೆಯನ್ನು ನಾನು ಕೇಳುವದಿಲ್ಲ. ಮುಂದಾಗಬೇಕಾದ ಕೆಲಸಗಳನ್ನು ಮಾಡಬೇಕಾಗಿರುವದು ನನ್ನ ಮುಂದಿನ ಗುರಿ ಎಂದರು.

ಪೋಷಕರು ಆವರಣದಲ್ಲಿರುವ ಒಣಗಿದ ಮರ ತೆರವು, ವಿದ್ಯಾರ್ಥಿಗಳಿಗೆ ಮೆಡಿಕಲ್ ಸೌಲಭ್ಯ ಆವರಣದಲ್ಲಿ ಪುಂಡಪೋಕರಿಗಳ ತಡೆಗಟ್ಟುವಿಕೆ ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಪಾಡುವದು ಮಕ್ಕಳ ಅನುಕೂಲಕ್ಕಾಗಿ ಕಾಯಿನ್ ಬೂತ್ ಅಳವಡಿಕೆ ಸಿಸಿ ಕ್ಯಾಮೆರಾ, ಬಿಸಿ ನೀರಿನ ವ್ಯವಸ್ಥೆ, ವಾಶಿಂಗ್ ಮಿಷನ್ ಸೌಲಭ್ಯ, ಗುಣಮಟ್ಟದ ಆಹಾರ ವಿತರಣೆ, ಅಡಿಗೆ ಟೆಂಡರ್ ಬದಲಾಯಿಸುವ ಹಾಗೂ ವಿದ್ಯಾರ್ಥಿಗಳು ವಿವಿಧ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ನಿಲಯದಲ್ಲಿ ವಿದ್ಯಾರ್ಥಿ ನಿಯರೊಂದಿಗೆ ಅನುಚಿತವಾಗಿ ವರ್ತಿಸುವ ಕೋಚ್ ಹಾಗೂ ವಾರ್ಡನ್ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪೋಷಕರಾದ ಕುಡೆಕಲ್ ಸಂತೋಷ್ ಸಭೆಗೆ ತಿಳಿಸಿದರು. ಬಹುತೇಕ ಪೋಷಕರು ಇವರ ಮಾತಿಗೆ ಒಪ್ಪಿಗೆ ಸೂಚಿಸಿದರು. ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಂಶುಪಾಲರಾದ ಚಂದನ ಅವರು ಕ್ರೀಡಾ ವಸತಿ ಶಾಲೆಯು ಇಲಾಖೆಯ ವ್ಯಾಪ್ತಿಯ ಕಟ್ಟಡದಲ್ಲಿ ನಡೆಯುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣ ಮಟ್ಟ ಹೆಚ್ಚಿಸಲು ಶ್ರಮ ವಹಿಸುತ್ತೇವೆ ಎಂದರು.ಕರ್ತವ್ಯ ನಿರ್ವಹಿಸುತ್ತಿರುವ ವಾರ್ಡನ್ ಕೆಲವು ಮಕ್ಕಳಿಗೆ ತಾರತಮ್ಯ ಮಾಡುವದನ್ನು ನಿಲ್ಲಿಸಬೇಕು. ಎಲ್ಲ ಮಕ್ಕಳನ್ನು ಒಂದೇ ರೀತಿಯಲ್ಲಿ ನೋಡುವಂತೆ ನಿರ್ದೇಶನ ನೀಡಬೇಕೆಂದು ಅಧÀ್ಯಕ್ಷರಿಗೆ ಪೋಷಕರು ಮನವಿ ಮಾಡಿದರು. ಪೋಷಕರ ಮಾತು ಆಲಿಸಿದ ಅಧ್ಯಕ್ಷ ಕಿರಣ್ ಕಾರ್ಯಪ್ಪ ಮುಂದೆ ಸೂಕ್ತವಾಗಿ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅಚ್ಚಪಂಡ ಮಹೇಶ್, ಬಿ.ಎನ್.ಪ್ರಥ್ವಿ, ಮೂಕೊಂಡ ವಿಜು ಸುಬ್ರಮಣಿ, ಮುರಳಿ ಕರುಂಬಯ್ಯ, ಭವ್ಯ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ ಉಪಸ್ಥಿತರಿದ್ದರು.

-ಹೆಚ್.ಕೆ.ಜಗದೀಶ್