ಕರಿಕೆ, ಆ. 28: ಗ್ರಾಮದ ಕುಂಡಿತಿಕಾನ ಎಂಬಲ್ಲಿ ನಿನ್ನೆ ಭೂಮಿಯೊಳಗಿನಿಂದ ಹೊರ ಬರುತ್ತಿದ್ದ ಶಬ್ಧದಿಂದ ಗ್ರಾಮಸ್ಥರು ಮನೆತೊರೆದು ಬೇರೆಡೆಗೆ ಸ್ಥಳಾಂತರಗೊಂಡು ಒಂದು ರೀತಿಯಲ್ಲಿ ಆತಂಕಕ್ಕೊಳಗಾಗಿದ್ದ ಸ್ಥಳಕ್ಕೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಬೆಂಗಳೂರು ಕೇಂದ್ರ ಉಸ್ತುವಾರಿ ತಂಡ ಹಾಗೂ ಕೊಡಗು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.

ಹಿರಿಯ ವಿಜ್ಞಾನಿಗಳಾದ ಅಭಿನಯ್, ಸುನಂದ ಬಸು, ವಾಸ್ತವ್, ರಮೇಶ್, ರೇಷ್ಮ, ನಾಗೇಂದ್ರಪ್ಪ ನೇತೃತ್ವದ ಜಂಟಿ ತಂಡ ಕರಿಕೆ ಚೆತ್ತುಕಾಯ, ಕುಂಡತ್ತಿಕಾನ ಕೇಶವ ನಾಯ್ಕ ಅವರ ಮನೆ ಸಮೀಪ ತೆರಳಿ ಸ್ಥಳ ಪರಿಶೀಲನೆ ನಡೆಸಿ ಯಾವದೇ ಅಪಾಯದ ಮುನ್ಸೂಚನೆ ಇಲ್ಲ. ಈ ಭಾಗದಲ್ಲಿ ಮಳೆ ಜಾಸ್ತಿಯಾದ ಕಾರಣ ನೀರಿನ ಮಾರ್ಗ ಬದಲಾವಣೆಯಾಗಿದ್ದು ಸದ್ಯಕ್ಕೆ ಈ ಒಂದು ಮನೆಯವರು ಮಾತ್ರ ಸ್ಥಳಾಂತರಗೊಂಡರೆ ಉತ್ತಮ. ಉಳಿದ ಗ್ರಾಮಸ್ಥರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.

ಇದರಿಂದ ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಉಂಟಾದ ಗೊಂದಲಕ್ಕೆ ತೆರೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಚಂದ್ರ ನಾಯರ್, ಪಿಡಿಓ ಬಿಪಿನ್, ಜಿ.ಪಂ. ಸದಸ್ಯೆ ಕವಿತಾ, ಪಂಚಾಯತಿ ಸದಸ್ಯರುಗಳು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.