ಸೋಮವಾರಪೇಟೆ, ಆ. 28: ಭಾರೀ ಮಳೆಗೆ ಸಿಲುಕಿ ಸಂತ್ರಸ್ತರಾಗಿರುವ ತಾಲೂಕಿನ ಕುಗ್ರಾಮಗಳಿಗೆ ತುಮಕೂರಿನ ಶಿರಾ ತಾಲೂಕಿನಿಂದ ಆಗಮಿಸಿದ ಪರಿಹಾರದ ಸಾಮಗ್ರಿಗಳನ್ನು ವಿತರಿಸಲಾಯಿತು.

ಭಾರೀ ಮಳೆಯಿಂದ ಊರು ಬಿಟ್ಟು ಪರಿಹಾರ ಕೇಂದ್ರಕ್ಕೆ ತೆರಳಿ ಈಗಷ್ಟೇ ತಮ್ಮ ಮನೆಗಳಿಗೆ ತೆರಳಿರುವ ಕುಟುಂಬಗಳು, ಬಿರು ಮಳೆಯಲ್ಲಿಯೂ ಜಾನುವಾರುಗಳನ್ನು ಬಿಟ್ಟುಬರಲು ಹಿಂದೇಟು ಹಾಕಿ ಮನೆಯೊಳಗೇ ಕುಳಿತಿದ್ದ ಕುಟುಂಬಗಳಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ತಾಲೂಕಿನ ಕಿಕ್ಕರಳ್ಳಿ, ಮಂಕ್ಯ, ಮೇದುರ ಮನೆ, ಚಾಮೇರ ಮನೆ, ಹರಗ ಗೋವಿನಗೌಡನ ಮನೆ ವ್ಯಾಪ್ತಿಯಲ್ಲಿ 300 ಇಂಚಿಗೂ ಅಧಿಕ ಮಳೆಯಾಗಿದ್ದು, ಗದ್ದೆಗಳು ಸಂಪೂರ್ಣ ಹಾಳಾಗಿವೆ. ಪ್ರಸಕ್ತ ಸಾಲಿನ ಕೃಷಿ ಸಂಪೂರ್ಣ ಹಾನಿಯಾಗಿರುವ ಹಿನ್ನೆಲೆ ಅಕ್ಕಿ, ಬೇಳೆ, ಎಣ್ಣೆ, ಬಟ್ಟೆ, ಖಾರದ ಪುಡಿ, ದನಿಯಾ ಪುಡಿ, ಬಕೇಟ್‍ಗಳು, ಟಾರ್ಚ್ ಲೈಟ್ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ನೀಡಲಾಯಿತು.

ಶಿರಾ ತಾಲೂಕಿನ ಆಕ್ಸ್‍ಫಡ್, ಮಂಜುಶ್ರೀ, ವಾಸವಿ, ಲಿಟಲ್‍ರೋಸಸ್, ಶಾಂತಿನಿಕೇತನ ಶಾಲೆಯ ಮುಖ್ಯಸ್ಥರುಗಳಾದ ರಮೇಶ್ ಬಾಬು, ಡಾ. ಉಮೇಶ್, ದೊಡ್ಡಸಿದ್ದಪ್ಪ, ಶಿವಮೂರ್ತಿ, ಕೃಷ್ಣಮೂರ್ತಿ ಅವರುಗಳು, ಶನಿವಾರಸಂತೆ ಸುಪ್ರಜ ಗುರುಕುಲದ ಮುಖ್ಯಸ್ಥೆ ಸುಜಲಾದೇವಿ, ಜಯಕರ್ನಾಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಅವರೊಂದಿಗೆ ಕುಗ್ರಾಮಗಳಿಗೆ ತೆರಳಿ ಪರಿಕರ ವಿತರಿಸಿದರು.

ಮಂಡ್ಯದಿಂದ ಪರಿಹಾರ: ತಾಲೂಕಿನ ಕುಮಾರಳ್ಳಿ-ಚಾಚಳ್ಳಿ ಗ್ರಾಮದ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಮಂಡ್ಯ ಜಿಲ್ಲೆಯ ದೊಡ್ಡಗರುಡನಹಳ್ಳಿ ಗ್ರಾಮಸ್ಥರು ಸಂಗ್ರಹಿಸಿ ತಂದ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭ ದೊಡ್ಡಗರುಡನಹಳ್ಳಿ ಕೃಷಿಕರಾದ ಯೋಗೇಶ್, ಕಾಳೇಗೌಡ, ಅಂದಾನಿಗೌಡ, ವಸಂತ್ ಕುಮಾರ್, ರಂಜು ಇದ್ದರು. ಗ್ರಾಮಸ್ಥರು ಮಂಡ್ಯದ ರೈತ ಮುಖಂಡರಿಗೆ ಧನ್ಯವಾದ ಅರ್ಪಿಸಿದರು.

ಉಜ್ವಲ ಅಕಾಡೆಮಿಯಿಂದ: ಬೆಂಗಳೂರಿನ ಉಜ್ವಲ ಅಕಾಡೆಮಿ ನಿರ್ದೇಶಕರುಗಳಾದ ಕೆ.ಯು. ಮಂಜುನಾಥ್, ಪಿ.ಎ. ರಾಜ್‍ಕುಮಾರ್ ಅವರುಗಳು ಕುಮಾರಳ್ಳಿ, ಬಾಚಳ್ಳಿ ಗ್ರಾಮಸ್ಥರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಿದರು. ಇದೆ ಸಂದರ್ಭ ಬೆಂಗಳೂರಿನ ಯಶವಂತ್, ಮನೋಹರ್ ಅವರುಗಳು ವಿವಿಧ ಸಾಮಗ್ರಿಗಳನ್ನು ನೀಡಿದರು.

ಕುಂಬಳಗೋಡಿನಿಂದ: ಬೆಂಗಳೂರಿನ ಕುಂಬಳಗೋಡು ಗೆಳೆಯರ ಬಳಗದ ಜಗದೀಶ್, ಮಣಿಕಂಠ, ಮಂಜು, ಪ್ರಜ್ವಲ್ ಗೌಡ, ಗಿರೀಶ್, ನಾಗೇಶ್ ಅವರುಗಳು ತಾಕೇರಿ, ಹಾನಗಲ್ಲು, ಹಟ್ಟಿಹೊಳೆ, ಐಗೂರು, ಇಗ್ಗೋಡ್ಲು ಗ್ರಾಮಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.