ಮಡಿಕೇರಿ, ಆ. 28: ಕೊಡಗು ಜಿಲ್ಲೆಯಲ್ಲಿ ಎದುರಾಗಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಜನತೆಯ ನೋವಿನಲ್ಲಿ, ರಾಜ್ಯ ಸರಕಾರ ಹಾಗೂ ಸಂಘ-ಸಂಸ್ಥೆಗಳೊಂದಿಗೆ, ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಯೂ ಬಾಗಿಯಾಗಲಿದೆ ಎಂದು ಮಾಜಿ ಸಚಿವ ಹಾಗೂ ಸಂಸ್ಥೆಯ ಪಾಲುದಾರರಾಗಿರುವ ಎಂ.ಆರ್. ಸೀತಾರಾಂ ಭರವಸೆ ನೀಡಿದ್ದಾರೆ. ಇಂದು ಇಲ್ಲಿನ ಕೊಡಗು ಸೇವಾ ಕೇಂದ್ರದಲ್ಲಿ ಅವರು ಸಂತ್ರಸ್ತರಿಗೆ ನೆರವು ಕಲ್ಪಿಸಿ ಮಾತನಾಡುತ್ತಿದ್ದರು.

ಇದುವರೆಗೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಮೃತರಾಗಿರುವ 13 ಮಂದಿಯ, ನತದೃಷ್ಟ ಸದಸ್ಯರಿಗೆ ತಲಾ ರೂ. 50 ಸಾವಿರದಂತೆ ಆರ್ಥಿಕ ನೆರವು ಒದಗಿಸಿ ಅವರು ಮಾತನಾಡುತ್ತಾ, ಕೊಡಗಿನ ಜನತೆಯ ಒಡನಾಟದೊಂದಿಗೆ ತಾವು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಮೆಲುಕು ಹಾಕಿದರು.

ಸಚಿವರೊಂದಿಗೆ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಕೂಡ ಸಾಂತ್ವನದ ನುಡಿಯಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಮಾಜಿ ಸಚಿವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಸೇರಿದಂತೆ ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ, ಪ್ರಮೋದ್, ಭಾಗಮಂಡಲ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ. ರಕ್ಷಾ ರಾಮಯ್ಯ ಸಹಿತ ಅನೇಕರು ಹಾಜರಿದ್ದರು.