ಮಡಿಕೇರಿ, ಆ. 28: ದೇವಸ್ತೂರು - ನಿಡುವಟ್ಟು ತನಕ ತಾತ್ಕಾಲಿಕ ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆ ಸದ್ಯದಲ್ಲೇ ಆಗಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ‘ಶಕ್ತಿ’ಯೊಂದಿಗೆ ನುಡಿದರು.ಎಲ್ಲಾ ಸಂತ್ರಸ್ತ ಸ್ಥಳಗಳಿಗೂ ಖುದ್ದಾಗಿ ಭೇಟಿ ನೀಡುತ್ತಿರುವ ಅನ್ಬುಕುಮಾರ್ ಇಂದು ಶ್ರೀ ರಾಮಕೃಷ್ಣ ಆಶ್ರಮದವರು ಉಚಿತ ಸಾಮಗ್ರಿ ವಿತರಿಸುತ್ತಿದ್ದ ಸ್ಥಳಕ್ಕೂ ಭೇಟಿ ನೀಡಿದರು. ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ಕಾಲೂರು, ಗಾಳಿಬೀಡು, ಹೆಬ್ಬೆಟ್ಟಗೇರಿ, ನಿಡುವಟ್ಟು ಹಾಗೂ ಇತರೆಡೆ ಭೇಟಿ ನೀಡುತ್ತಿದ್ದು, ವಿವಿಧ ಇಲಾಖೆಗಳು ಸಮರೋಪಾದಿ ಕಾರ್ಯದಲ್ಲಿ ತೊಡಗಿರುವದಾಗಿ ಹೇಳಿದರು.ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬ ಅಳವಡಿಸುತ್ತಿದ್ದು, ಪೂರೈಕೆಗೆ ಯತ್ನಿಸುತ್ತಿದ್ದಾರೆ ಎಂದರು. ಪಂಚಾಯತ್ ರಾಜ್ ಮೂಲಕ ಜೂನಿಯರ್ ಇಂಜಿನಿಯರ್ ಗವಿಸಿದ್ದಪ್ಪ ನೇತೃತ್ವದಲ್ಲಿ ನಷ್ಟದ ಅಂದಾಜು ಲೆಕ್ಕಾಚಾರ ಆರಂಭವಾಗಿದೆ. ಜೆಸಿಬಿ ಯಂತ್ರಗಳು ತಾತ್ಕಾಲಿಕ ರಸ್ತೆ ನಿರ್ಮಾಣದಲ್ಲಿ ತೊಡಗಿವೆ ಎಂದು ಅನ್ಬುಕುಮಾರ್ ಹೇಳಿದರು.
ಅಲ್ಲಲ್ಲಿ ನೆಲ ನಡುಗಿದ, ಸದ್ದಾದ ಕುರಿತು ಸುದ್ದಿಗಳು ಹಬ್ಬುತ್ತಿರುವ ಬಗ್ಗೆ ಕೇಳಿದಾಗ, ಸದ್ಯಕ್ಕೆ ಅಂತ ದೊಡ್ಡ ಅಪಾಯದ ಮುನ್ಸೂಚನೆ ಏನೂ ಇಲ್ಲ. ಹಾಗೇನಾದರೂ ಇದ್ದಲ್ಲಿ ಜಿಲ್ಲಾಡಳಿತ ಪ್ರಕಟಣೆ ನೀಡುತ್ತದೆ ಎಂದರು. ಈಗಾಗಲೇ ಭೂವಿಜ್ಞಾನಿಗಳ ತಂಡವೂ ಕಾರ್ಯ ಆರಂಭಿಸಿದ್ದು, ರಸ್ತೆ ವ್ಯವಸ್ಥೆ ಆದ ಕೂಡಲೇ ಆಯಾಯ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಎಂದರು.