ಮಡಿಕೇರಿ, ಆ. 28: ಪ್ರಸಕ್ತ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದಿರುವ ಮಳೆ ಅಂಕಿ ಅಂಶಗಳ ಪ್ರಕಾರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಮೂರು ತಾಲೂಕಿನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಬಾರಿ ಈಗಾಗಲೇ ಸುಮಾರು 250 ರಿಂದ 300 ಇಂಚಿಗೂ ಅಧಿಕ ಮಳೆಯಾಗಿರುವದು ಒಂದೆಡೆಯಾದರೆ ತಾಲೂಕುವಾರು ಮಳೆಯ ಪ್ರಮಾಣವನ್ನು ಹೋಲಿಸಿ ದರೆ ಮಡಿಕೇರಿ ತಾಲೂಕಿನಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದಿರುವ ಮಳೆಯ ಪ್ರಮಾಣ ಈ ಬಾರಿ ಎರಡು ಪಟ್ಟಿಗೂ ಅಧಿಕ ಕಂಡು ಬಂದಿದೆ. ಪ್ರಸಕ್ತ ವರ್ಷ ಈ ತನಕ ಮಡಿಕೇರಿ ತಾಲೂಕಿಗೆ ಸರಾಸರಿ 213.80 ಇಂಚು ಭಾರೀ ಮಳೆಯಾಗಿದ್ದರೆ, ವೀರಾಜಪೇಟೆ ತಾಲೂಕಿನಲ್ಲಿ 113.03 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 118.91 ಇಂಚಿನಷ್ಟಿದೆ. ಕಳೆದ ವರ್ಷ ಈ ಪ್ರಮಾಣ ಮಡಿಕೇರಿ ತಾಲೂಕಿನಲ್ಲಿ ಕೇವಲ 94.87 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 51.39 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 52.14 ಇಂಚಿನಷ್ಟು ಮಾತ್ರ ದಾಖಲಾಗಿತ್ತು. ಇನ್ನು ಜಿಲ್ಲಾ ಸರಾಸರಿ ಮಳೆಯೂ ದುಪ್ಪಟ್ಟಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ 66.14 ಇಂಚು ಮಳೆಯಾಗಿದ್ದರೆ, ಈ ಬಾರಿ ಮಳೆಯ ಪ್ರಮಾಣ 148.58 ಇಂಚಿನಷ್ಟಾಗಿದೆ.

24 ಗಂಟೆಗಳ ವಿವರ

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಮಡಿಕೇರಿ ತಾಲೂಕಿನಲ್ಲಿ 1.67 ಇಂಚು, ವೀರಾಜಪೇಟೆಯಲ್ಲಿ 0.63 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 0.56 ಇಂಚಿನಷ್ಟು ಸರಾಸರಿ ಮಳೆಯಾಗಿದೆ.

ಹೋಬಳಿವಾರು

ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿಯಲ್ಲಿ 1.96, ನಾಪೋಕ್ಲು 0.63, ಸಂಪಾಜೆ 1.96 ಹಾಗೂ ಭಾಗಮಂಡಲ ಹೋಬಳಿಯಲ್ಲಿ 2.13 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಹೋಬಳಿಯಲ್ಲಿ 0.69, ಹುದಿಕೇರಿ 0.96, ಶ್ರೀಮಂಗಲ 0.76, ಪೊನ್ನಂಪೇಟೆ 0.56, ಬಾಳಲೆ ಹೋಬಳಿಯಲ್ಲಿ 0.56 ಇಂಚು ಮಳೆ ಸುರಿದಿದೆ. ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಹೋಬಳಿಯಲ್ಲಿ 0.50, ಶನಿವಾರಸಂತೆ 0.46, ಶಾಂತಳ್ಳಿ 1.09, ಕೊಡ್ಲಿಪೇಟೆ 0.45, ಸುಂಟಿಕೊಪ್ಪ 0.56 ಇಂಚು ಮಳೆಯಾಗಿದೆ.