ಸೋಮವಾರಪೇಟೆ, ಆ. 28: ‘ಬೆಟ್ಟ ಕುಸಿಯುತ್ತಿದೆ ಎಂದು ನಡುರಾತ್ರಿ 2 ಗಂಟೆಗೆ ಫೋನ್ ಮಾಡಿದ್ರು.., ಆವಾಗ ನಾವೆಲ್ಲಿಗೆ ಹೋಗೋಕೆ ಆಗುತ್ತೆ. ಪಕ್ಕದ ಮನೆಯಲ್ಲಿ ಅಜ್ಜಿ ಬೇರೆ ಇದ್ರು., ಅವ್ರನ್ನು ಹೇಗೆ ಕರ್ಕೊಂಡು ಹೋಗೋದು ಹೇಗೆ? ದೇವರಿಟ್ಟ ಹಾಗೆ ಆಗಲಿ ಎಂದು ಮನೆಯೊ ಳಗೆಯೇ ಇದ್ವಿ.., ಏಳು ದಿನದ ನಂತರ ನಮ್ಮೂರಿನವರು ವಾಪಸ್ ಬಂದ್ರು, ಈಗ ನಮಗೆ ಸಮಾಧಾನವಾಯ್ತು..!’
ಇದು ತಾಲೂಕಿನ ಕಿರಗಂದೂರು ಗ್ರಾಮದ ಮಕ್ಕಳಗುಡಿ ಬೆಟ್ಟಕ್ಕೆ ಅಂಟಿಕೊಂಡಂತಿರುವ ಊರುಬೆಟ್ಟ ನಿವಾಸಿ ವಿಶ್ವನಾಥ್ ಅವರ ಮಾತು. ‘ಕಳೆದ ತಾ. 18 ರಂದು ಮಧ್ಯಾಹ್ನ 2.15ಕ್ಕೆ ಮಕ್ಕಳಗುಡಿ ಬೆಟ್ಟದ ಕೆಳಭಾಗದಲ್ಲಿ ಮಣ್ಣು ಕುಸಿತಗೊಂಡಾಗ ಅಲ್ಲಿನವರೆಲ್ಲರೂ ಮನೆಬಿಟ್ಟು ಹೊರಗೋಡಿದರು. ಇದೇ ಬೆಟ್ಟಕ್ಕೆ ಅಂಟಿಕೊಂಡಂತಿರುವ ಊರುಬೆಟ್ಟದಲ್ಲಿ 27 ಮನೆಗಳಿದ್ದವು. ತಾ. 19 ರಂದು ಬೆಳಿಗ್ಗೆ ನೋಡಿದ್ರೆ ನಮ್ಮ ಎರಡು ಮನೆಯವರನ್ನು ಬಿಟ್ಟು ಉಳಿದವರೆಲ್ಲರೂ ಮನೆ ಖಾಲಿ ಮಾಡಿದ್ರು. ನಿನ್ನೆಯಷ್ಟೇ ಎಲ್ಲರೂ ಮರಳಿ ಮನೆಗೆ ಬಂದಿದ್ದಾರೆ. ನಮಗೂ ಸಮಾಧಾನವಾಯ್ತು’ ಎಂದು ವಿಶ್ವನಾಥ್ ತಿಳಿಸಿದರು.
ಕಳೆದ ತಾ. 18 ರಿಂದ 26 ರವರೆಗೆ ಊರುಬೆಟ್ಟದಲ್ಲಿ ಜೀವಕೈಯಲ್ಲಿಡಿದು ಕೊಂಡೇ ಸಮಯ ದೂಡಿದ ವಿಶ್ವನಾಥ್ ಮತ್ತು ಶೇಖರ್ ಕುಟುಂಬಕ್ಕೆ ಇದೀಗ ಗ್ರಾಮಸ್ಥರನ್ನು ಕಂಡು ನೆಮ್ಮದಿ ಮೂಡಿದಂತಾಗಿದೆ. ತಾ. 18 ರಂದು ಮನೆ ಬಿಟ್ಟು ಪರಿಹಾರ ಕೇಂದ್ರ ಸೇರಿದವರು ಮನೆಗೆ ಮರಳುತ್ತಿದ್ದಾರೆ. ನಾವುಗಳೂ ಸಹ 18 ರಂದೇ ಮನೆ ಬಿಡ ಬೇಕೆಂದು ನಿರ್ಧರಿಸಿದ್ದೆವು. ಮೇಲಿನಿಂದ ಬೆಟ್ಟ ಕುಸಿಯು ತ್ತಿದೆ ಎಂದು ಹಲವರು ಫೋನ್ ಮಾಡಿದ್ರು, ಪಕ್ಕದ ಮನೆಯಲ್ಲಿ ಅಜ್ಜಿ ಬೇರೆ ಇದ್ದಾರೆ. ಅವರನ್ನು ಬಿಟ್ಟು ಬರೋದು ಹೇಗೆ ಅಂತ ಚಿಂತಿಸಿದ್ದೆವು. ಹಗಲೂ ರಾತ್ರಿ ಬೆಟ್ಟದ ಕಡೆಯೇ ದೃಷ್ಟಿ ಹರಿಸಿದ್ದೆವು. ಅಗತ್ಯ ಸಾಮಗ್ರಿ, ದಾಖಲೆ ಪತ್ರಗಳನ್ನು ಚೀಲದೊಳಗೆ ತುಂಬಿಸಿಕೊಂಡಿದ್ದೆವು. ಯಾವದೇ ಸಂದರ್ಭದಲ್ಲಾದರೂ ಅಜ್ಜಿಯ ಸಹಿತ ಮನೆ ಬಿಡುವ ಆಲೋಚನೆ ಮಾಡಿದ್ದೆವು. ದೇವರ ದಯದಿಂದ ಯಾವ ಅನಾಹುತವೂ ಆಗಲಿಲ್ಲ. 7 ದಿನಗಳ ಕಾಲ ಎರಡೇ ಮನೆಯವರು ಗ್ರಾಮದಲ್ಲಿ ಉಳಿದೆವು ಎಂದು ತಮ್ಮ ಅನುಭವವನ್ನು ‘ಶಕ್ತಿ’ ಯೊಂದಿಗೆ ವಿಶ್ವನಾಥ್ ಹಂಚಿಕೊಂಡರು. ಮಕ್ಕಳಗುಡಿ ಬೆಟ್ಟ ಕಲ್ಲುಬಂಡೆಗಳಿಂದ ಕೂಡಿದೆ. ಅಷ್ಟು ಸುಲಭಕ್ಕೆ ಕಲ್ಲು ಜರುಗೋದಿಲ್ಲ ಎಂಬ ನಂಬಿಕೆಯಿದೆ. ಆದರೆ ಬಂಡೆಗೆ ಅಂಟಿಕೊಂಡಿರುವ ಮಣ್ಣು ಭಾರೀ ಪ್ರಮಾಣದಲ್ಲಿ ಜರುಗಿದೆ ಎಂದು ವಿಶ್ವನಾಥ್ ಹೇಳಿದರು. ತಾ. 18 ರಂದು ಬೆಟ್ಟದ ಕೆಳಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ 20 ಎಕರೆಗೂ ಅಧಿಕ ಪ್ರದೇಶಕ್ಕೆ ಹಾನಿಯಾಗಿದೆ. ಕಿರಗಂದೂರು ಗ್ರಾಮದ ರೋಷನ್ ಪೂವಯ್ಯ, ನಿಂಗರಾಜು ಅವರುಗಳಿಗೆ ಸೇರಿದ ತೋಟ, ಗದ್ದೆ ಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ. ಇದರೊಂದಿಗೆ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟವೂ ನಷ್ಟಕ್ಕೊಳಗಾಗಿದೆ. ರೋಷನ್ ಪೂವಯ್ಯ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೂತನ ಮನೆಗಾಗಿ ನಿರ್ಮಿಸಿದ್ದ ಅಡಿಪಾಯ ಭೂಕುಸಿತಕ್ಕೆ ಒಳಗಾಗಿ ಕಣ್ಮರೆಯಾಗಿದೆ. ಬೆಟ್ಟ, ತೋಟದಲ್ಲಿದ್ದ ಬೃಹತ್ ಮರಗಳು ಕೊಚ್ಚಿಕೊಂಡು ಬಂದು ರಸ್ತೆ-ತೋಟದೊಳಗೆ ಬಿದ್ದಿವೆ. ಈ ಭಾಗದಲ್ಲಿ ಪರಿಹಾರ ಕಾರ್ಯಾಚರಣೆ ಇನ್ನಷ್ಟೇ ಪ್ರಾರಂಭವಾಗಬೇಕಿದೆ.
- ವಿಜಯ್