ಸೋಮವಾರಪೇಟೆ, ಆ.28: ತಾಲೂಕಿನ ಸುಂಟಿಕೊಪ್ಪ ಪ್ರೌಢ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಕರ್ತವ್ಯದಲ್ಲಿದ್ದ ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸುಂಟಿಕೊಪ್ಪದ ಮದರಸದಲ್ಲಿದ್ದ ಸಂತ್ರಸ್ಥರನ್ನು ಪ್ರೌಢಶಾಲೆಗೆ ಸ್ಥಳಾಂತರಿಸಿದ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದರು. ಪರಿಹಾರ ಕೇಂದ್ರದಲ್ಲಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ 'ಏನ್ ಮಾಡ್ತಿದ್ದೀರಿ ನೀವು, ಊಟ ಕೊಡದಿಲ್ಲಾಂದ್ರೆ ಕೆಲಸದಿಂದ ಇವತ್ತೇ ತೆಗೀತೀನಿ. ಏನಮ್ಮಾ ಡ್ಯೂಟಿ ಮಾಡ್ತಿರೋದು ನೀವು, ನೋಡಲ್ ಆಫೀಸರ್ ಅಗಿ ಹಾಕಿಲ್ವಾ, ಡ್ಯೂಟಿ ಲಿಸ್ಟ್ ಕೊಡಿ, ಕೆಲಸ ಮಾಡಬೇಕು, ಬಂದಿರುವ ಜನರಿಗೆ ಕೆಲಸ ಮಾಡಲು ನಿಮ್ಮನ್ನ ಕರೀತಿರೋದು, 24/7 ಡ್ಯೂಟಿ ಅರ್ಡರ್ ಕೊಟ್ಟಿದ್ದಾರೆ' ಎಂದು ಅಧಿಕಾರಿಗಳಿಗೆ ತಮ್ಮ ಕರ್ತವ್ಯವನ್ನು ನೆನಪಿಸಿದರು. ಮುಂದುವರಿದ ಜಿಲ್ಲಾಧಿಕಾರಿಗಳು, ‘ಬಂದು ಆಫೀಸ್ ಲಿ ಕೂತ್ಕೊಳ್ಳೋದಲ್ಲ, ಇನ್ ಟೈಂ ಊಟ ಟೀ ತಿಂಡಿ ನೊಡ್ಕೋಳ್ಳೋದು ಕೆಲಸ, ಒಬ್ಬೊಬ್ಬರನ್ನು ಕರೆದು ನಾನು ಆರ್ಡರ್ ಕೊಡೋದಿಲ್ಲ. ಕೆಲಸ ಮಾಡ್ಬೇಕು ಮಾಡಿ, ಒಳಗೆ ಕೂತು ಕೆಲಸ ಮಾಡೋದಲ್ಲ. ಐ ಡೋಂಟ್ ವಾಂಟ್ ದಟ್ ಕೈಂಡ್ ಆಫ್ ದ ಪೀಪಲ್...ಊರು ಬಿಟ್ಟು ಬಂದಿರುವ ಜನರಿಗೆ ಊಟ ಕೊಡಬೇಕು.’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಸೇರಿದಂತೆ ಶಿಕ್ಷಣ ಇಲಾಖೆ ಸಿಬ್ಬಂದಿಗಳು, ಇತರ ಇಲಾಖಾಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಗಳು ವಾರ್ನಿಂಗ್ ಮಾಡಿದರು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಮಹೇಶ್ ಉಪಸ್ಥಿತರಿದ್ದರು.