ಮೂರ್ನಾಡು, ಆ. 28: ಕಾಂಡನಕೊಲ್ಲಿ-ಕೊಪ್ಪತ್ತೂರು ಗ್ರಾಮಸ್ಥರಿಗೆ ಮೂರ್ನಾಡು ಹಾಗೂ ವೀರಾಜಪೇಟೆ ಯುವಕರಿಂದ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ದಾನಿಗಳು ವಿವಿಧೆಡೆಯಿಂದ ನೀಡಿದ ಆಹಾರ ಸಾಮಗ್ರಿಗಳನ್ನು ಮೂರ್ನಾಡಿನ ಹನುಮಾನ್ ಟ್ರೇಡರ್ಸ್‍ನಲ್ಲಿ ಪುದಿಯೊಕ್ಕಡ ರಮೇಶ್ ನೇತೃತ್ವದಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಎರಡು ಪಿಕ್‍ಅಪ್ ಸಾಮಗ್ರಿಗಳನ್ನು ಕೊಪ್ಪತ್ತೂರು ಗ್ರಾಮಸ್ಥರ ಮನೆಗೆ ತೆರಳಿ ವಿತರಿಸಲಾಯಿತು. ಕೊಪ್ಪತ್ತೂರು ಗ್ರಾಮಕ್ಕೆ ತೆರಳಲು ರಸ್ತೆ ಸಂಪರ್ಕ ಇಲ್ಲದೆ ಇದ್ದು ಮೂರ್ನಾಡಿನಿಂದ ಸುಂಟಿಕೊಪ್ಪದ ಬಾಳೆಕಾಡು ಎಸ್ಟೇಟ್ ಮೂಲಕ ಸಾಗಿ 8 ಕಿ.ಮೀ. ತೋಟದ ಮಧ್ಯೆ ಇರುವ ಇಕ್ಕಟ್ಟಾದ ರಸ್ತೆಯಲ್ಲಿ ಸಾಗಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕೊಪ್ಪತ್ತೂರು ಗ್ರಾಮಸ್ಥರು ಸುಂಟಿಕೊಪ್ಪ ಗಂಜಿ ಕೇಂದ್ರದಲ್ಲಿ ಇಲ್ಲಿಯವರೆಗೆ ತಂಗಿದ್ದು ಎರಡು ಮೂರು ದಿನಗಳಿಂದ ಗ್ರಾಮಸ್ಥರು ಮತ್ತೆ ಮನೆಗಳತ್ತ ತೆರಳುತ್ತಿದ್ದಾರೆ. ಗ್ರಾಮಸ್ಥರಿಗೆ ಆಹಾರ ಸಾಮಗ್ರಿಗಳನ್ನು ಮನೆಗಳಿಗೆ ಕೊಂಡ್ಯೊಯಲು ರಸ್ತೆ ಮಾರ್ಗಗಳು ಸಂಪೂರ್ಣ ಕುಸಿದಿದ್ದು ಆಹಾರ ಸಾಮಗ್ರಿಗಳಿಗೆ ಪರದಾಡುವಂತಾಗಿದೆ. ಈ ಹಿನ್ನೆಲೆ ಮೂರ್ನಾಡು ಹಾಗೂ ವೀರಾಜಪೇಟೆ ಯುವಕರು ಆಹಾರ ಸಾಮಗ್ರಿಗಳನ್ನು ವಿತರಿಸಿ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.