ಮಡಿಕೇರಿ, ಆ. 28: ಅತಿವೃಷ್ಟಿ, ಭೂಕುಸಿತ, ಜಲ ಸ್ಫೋಟಗಳಲ್ಲಿ ಕಾಟಕೇರಿಯ ಮೂವರು ಬಲಿಯಾಗಿ ಇನ್ನೂ ಹಲವರು ಗಂಭೀರ ಗಾಯಗೊಂಡು ನರಳಾಡುತ್ತಿರುವ ನೆನಪು ಇಡೀ ಗ್ರಾಮವನ್ನೇ ಸ್ಮಶಾನ ಮೌನಕ್ಕೆ ಈಡುಮಾಡಿದೆ. ಈ ಗ್ರಾಮದಲ್ಲಿ ಈಗ ಜನರೇ ಇಲ್ಲ. ಮೃತದೇಹಗಳನ್ನು ಪತ್ತೆ ಮಾಡುವ ಕಾರ್ಯಾಚರಣೆ ಸಂದರ್ಭ ತೆರಳಿದ್ದ ‘ಶಕ್ತಿ’ ಪ್ರತಿನಿಧಿಗೆ ಅಲ್ಲಿ ಒಂದು ಊರು ಇತ್ತು ಎನ್ನುವದು ಕೂಡ ಕಾಣಲಾಗದಷ್ಟು ಹಾನಿ ಆಗಿರುವ ಚಿತ್ರಣ ಎದುರಾಯಿತು. ಸಾವಿಗೀಡಾದವರನ್ನು ನೋಡಿ ಅಂತಿಮ ದರ್ಶನ ಪಡೆಯಲು ಕೂಡ ಎಲ್ಲ ಬಂಧು ಬಳಗ, ಊರಿನವರು ಬರಲಾಗಲಿಲ್ಲ. ಏಕೆಂದರೆ ಅಲ್ಲಿಗೆ ಎಲ್ಲರೂ ತೆರಳಲು ಸಾಧ್ಯವಿಲ್ಲ. ಒಂದೆಡೆ ಅನೇಕ ಹೊಳೆಗಳು ಗದ್ದೆಗಳ ಮೇಲೆ ಹರಿಯುತ್ತಿವೆ. ಗದ್ದೆಗಳಲ್ಲಿ ಕಾಲಿಟ್ಟರೆ ಕಾಲುಗಳು ಭೂಗತವಾಗುತ್ತವೆ. ಕೆಲವೆಡೆ ನೀರಿನ ಆಳ ಹೆಚ್ಚಿದ್ದು, ನೀರಿನ ಮೇಲೆ ನಡೆದರೂ ಅಪಾಯ ತಪ್ಪಿದ್ದಲ್ಲ. ಇದರ ನಡುವೆ, ಗ್ರಾಮದ ಮೇಲ್ಭಾಗದಲ್ಲಿರುವ ಮನೆ, ಗದ್ದೆ, ತೋಟಗಳು ಕೆಳ ಭಾಗಕ್ಕೆ ಜಾರಿದ್ದು, 90 ಡಿಗ್ರಿ ಎತ್ತರಕ್ಕೆ ತೆರಳುವದು ಒಂದು ದುಸ್ಸಾಹಸವೇ ಸರಿ. ಹಾಗಾಗಿ ಆ ಪ್ರದೇಶದಲ್ಲಿ ಜನಸಂಚಾರವೇ ಸ್ಥಗಿತಗೊಂಡಿದೆ. ಪ್ರಸಾದ್ ಎಂಬವರ ಮನೆ ಸಂಪೂರ್ಣ ಕುಸಿದಿದೆ. ಮತ್ತೊಂದು ಮನೆಯು ನೆಲಕಚ್ಚಿದೆ. ತಾ. 16 ರ ರಾತ್ರಿ ದುರ್ಘಟನೆ ನಡೆದ ಸಂದರ್ಭ ಜಲ ಸ್ಫೋಟಗೊಂಡು ಎರಡು ಮನೆಗಳು ಉರುಳಿ ಬಿದ್ದಾಗ ಕೆಳ ಭಾಗದಲ್ಲಿದ್ದ ನಿವಾಸಿಗಳಾದ ಪವನ್, ವೆಂಕಟರಮಣ ಹಾಗೂ ಯಶವಂತ್ ಮತ್ತಿತರರು ಏನಾಯಿತು ಎಂದು ಹೊರಬಂದವರು ಮೇಲ್ಭಾಗದಿಂದ ಭಾರೀ ಜಲ ಪ್ರವಾಹದೊಂದಿಗೆ ಕುಸಿದು ಬೀಳುತ್ತಿದ್ದ ಕೆಸರು ಮಣ್ಣಿನ ನಡುವೆ ಸಿಲುಕಿ ಮೂವರೂ ಪ್ರಾಣ ಕಳೆದುಕೊಂಡರು. ಮನೆ ಮಂದಿ ತಮ್ಮ ಮನೆಯವರು ಕಿರುಚಾಡಿದ ಶಬ್ಧ ಕೇಳುತ್ತಿದ್ದಂತೆ ಹೊರ ಬಂದಾಗ ಎಲ್ಲವೂ ಅಯೋಮಯವಾಗಿತ್ತು. ಪತ್ನಿ, ಮಕ್ಕಳು, ಮನೆಯವರು ಮನೆಯಜಮಾನರನ್ನೇ ಕಳೆದುಕೊಂಡು ವಿಹ್ಹಲರಾದರು. ಈ ಎಲ್ಲ ಗದ್ದಲ ಕೇಳಿ ಗ್ರಾಮಸ್ಥರು ಸಕಾಲಿಕವಾಗಿ ತೆರಳಿ ಇನ್ನುಳಿದವರ ಪ್ರಾಣ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕರೆತಂದರು.

ಈ ವಿಭಾಗದಲ್ಲಿ ಒಟ್ಟು ಸುಮಾರು 60 ಮನೆಗಳು ಬಿರುಕು ಬಿಟ್ಟು, ಯಾರೂ ಕೂಡ ವಾಸಿಸದಂತಾಗಿದೆ. ಊರಿಗೆ ಊರೇ ಖಾಲಿ ಮಾಡಿ ತೆರಳಿದ್ದಾರೆ ಎಂದು ಪಂಚಾಯಿತಿ ಸದಸ್ಯ ಹುದೇರಿ ರಾಜೇಶ್ ‘ಶಕ್ತಿ’ಯೊಂದಿಗೆ ದುಃಖದಿಂದ ನುಡಿದರು.

ಮೃತರಾದವರ ಕುಟುಂಬ ಸದಸ್ಯರು ಹಾನಿಗೀಡಾಗಿ ಬಳಲಿ ಸೊರಗುತ್ತಿರುವವರು ‘ಶಕ್ತಿ’ಯೊಂದಿಗೆ ದುಃಖ ತೋಡಿಕೊಂಡರು.

ಇಲ್ಲಿ ಬದುಕುವದು ಹೇಗೆ? ಸಂತ್ರಸ್ತ ಕೇಂದ್ರಗಳಲ್ಲಿದ್ದರೆ ಮನೆಯಲ್ಲಿದ್ದ ಅಳಿದುಳಿದ ವಸ್ತುಗಳನ್ನು ಇನ್ಯಾರೋ ಅಪಹರಣ ಮಾಡುತ್ತಾರೆ. ಬಿರುಕುಬಿಟ್ಟ ಮನೆಯಲ್ಲಿ ವಾಸಿಸುವಂತೆಯೂ ಇಲ್ಲ. ಸಂತ್ರಸ್ತ ಕೇಂದ್ರಗಳಿಗೆ ತೆರಳಿ ನೆಮ್ಮದಿಯಿಂದ ಇರಲೂ ಅಸಾಧ್ಯ. ಈ ದುಸ್ಥಿತಿಯಲ್ಲಿ ನಮ್ಮನ್ನು ರಕ್ಷಿಸುವವರು ಯಾರು ಎಂಬದೇ ತಿಳಿಯದಾಗಿದೆ. ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರಿಸುವದು ಹೇಗೆ ಎಂಬ ಚಿಂತೆ ಮೂಡಿದೆ. ಶಾಶ್ವತ ಪರಿಹಾರ ದೊರಕದಿದ್ದಲ್ಲಿ ಗಂಡಂದಿರನ್ನು ಕಳೆದುಕೊಂಡ ಮಂದಿ ಚಿಕ್ಕ ಮಕ್ಕಳೊಂದಿಗೆ ಜೀವನ ನಡೆಸುವದು ಹೇಗೆ ಎಂಬದು ಗಂಭೀರ ಪ್ರಶ್ನೆಯಾಗಿದೆ.