ಮಡಿಕೇರಿ, ಆ. 28: ಭೂಕಂಪನ ಸೇರಿದಂತೆ ಪ್ರಕೃತಿಯಲ್ಲುಂಟಾಗುವ ಸಂಚಲನಗಳನ್ನು ಪತ್ತೆ ಹಚ್ಚುವ ಸಲುವಾಗಿ ಇದೀಗ ಜಿಲ್ಲೆಯಲ್ಲಿ ಸೆಸ್ಮೋಗ್ರಾಫ್ ಯಂತ್ರವನ್ನು ಅಳವಡಿಸಲಾಗಿದೆ. ಹೈದರಾಬಾದ್‍ನ ನ್ಯಾಷನಲ್ ಜಿಯೋಫಿಸಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್‍ನ (ಎನ್‍ಜಿಆರ್‍ಐ) ಇಬ್ಬರು ಹಿರಿಯ ವಿಜ್ಞಾನಿಗಳು 3 ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದು, ಗಾಳಿಬೀಡು ಸನಿಹದ ನವೋದಯ ವಿದ್ಯಾಲಯದಲ್ಲಿ ಈ ಯಂತ್ರವನ್ನು ಅಳವಡಿಸಿದ್ದಾರೆ.ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಸಾಕಷ್ಟು ಹಾನಿಯುಂಟಾಗಿದ್ದು, ಇನ್ನೂ ಕೂಡ ಅಲ್ಲಲ್ಲಿ ಭೂಕುಸಿತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕೋರಿಕೆ ಮೇರೆಗೆ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಆದೇಶದ ಮೇರೆ ಈ ಯಂತ್ರವನ್ನು ಅಳವಡಿಸಲಾಗಿದೆ. ಯುಎಸ್‍ಎನಿಂದ ಆಮದು ಮಾಡಿಕೊಳ್ಳಲಾಗಿರುವ ಈ ಯಂತ್ರವನ್ನು ಸುರಕ್ಷಿತ ಸ್ಥಳದಲ್ಲಿರಿಸಬೇಕಾಗಿರುವದರಿಂದ ನವೋದಯ ವಿದ್ಯಾಲಯದ ಬಯಾಲಜಿ ಲ್ಯಾಬ್‍ನಲ್ಲಿರಿಸ ಲಾಗಿದೆ.ಈ ಯಂತ್ರದ ಎಲ್ಲ ಕಾರ್ಯ ಚಟುವಟಿಕೆಗಳನ್ನ ಹೈದರಾಬಾದ್ ನಲ್ಲಿರುವ ಕೇಂದ್ರದಲ್ಲಿ ಪರಿಶೀಲಿಸ ಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಧಾರವಾಡದಲ್ಲಿ ಮಾತ್ರ ಈ ಯಂತ್ರವಿದ್ದು, ಇದೀಗ ಕೊಡಗಿನಲ್ಲಿ ಅಳವಡಿಸುವದರ ಮೂಲಕ ಎರಡು ಕಡೆಗಳಲ್ಲಿ ಅಳವಡಿಸಿದಂತಾಗಿದೆ. ಎನ್‍ಜಿಆರ್‍ಐನ ಹಿರಿಯ ವಿಜ್ಞಾನಿ ರಾಘವನ್ ಅವರ ಪ್ರಕಾರ ಎರಡು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಕಂಪನವಾಗಿರುವದು ಕಂಡು ಬಂದಿದೆ ಎಂದು ನವೋದಯ ಪ್ರಾಂಶುಪಾಲ ಐಸಾಕ್ ‘ಶಕ್ತಿ’ಗೆ ತಿಳಿಸಿದ್ದಾರೆ.