ಸೋಮವಾರಪೇಟೆ, ಆ. 28: ಸಿದ್ದಾಪುರದ ಬಿ.ಬಿ.ಟಿ.ಸಿ. ಸಂಸ್ಥೆಯ ವತಿಯಿಂದ ಕಳ್ಳಿಚಂಡ ಬೋಪಣ್ಣ ನೇತೃತ್ವದಲ್ಲಿ 60 ಮಂದಿಯ ತಂಡ ಸ್ವಯಂ ಪ್ರೇರಕರಾಗಿ ಮೇಕೇರಿ, ಮಕ್ಕಂದೂರು, ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಮೀಪದ ರಸ್ತೆಗಳಲ್ಲಿ ಬಿದ್ದಿರುವ ಮಣ್ಣು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸುವ ಕೆಲಸವನ್ನು ಕಳೆದ 2 ದಿನಗಳಿಂದ ಈ ತಂಡ ಮಾಡುತ್ತಿದೆ.
ಜಿಲ್ಲೆಯಲ್ಲಿ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಜನತೆ ತಮ್ಮ ಮನೆಗಳಿಗೆ ತೆರಳುವ ದಾರಿಯನ್ನು ಹುಡುಕುತ್ತಿದ್ದಾರೆ. ಒಂದೆಡೆ ಮನೆಗಳ ಅವಶೇಷಗಳನ್ನು ಕಣ್ಣಾರೆ ನೋಡುತ್ತಿರುವ ಕುಟುಂಬಗಳಿಗೆ ಇದೀಗ ದಾರಿ ತೋಚದಂತಾಗಿದೆ. ರಸ್ತೆಗಳಲ್ಲಿ ಸಂಪೂರ್ಣ ಕೆಸರು ತುಂಬಿದೆ. ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕುಸಿದಿದೆ. ಸೋಮವಾರ ಪೇಟೆಯಿಂದ ಮಡಿಕೇರಿಗೆ ತೆರಳಬೇಕಾದವರು ಮಾದಾಪುರ-ಸುಂಟಿಕೊಪ್ಪ-ಮಾರ್ಗ ಬಳಸಬೇಕಾಗಿದೆ. ಹಲವೆಡೆ ಇಲಾಖೆಗಳು ಮಾಡಬೇಕಾದ ಕೆಲಸಗಳನ್ನು ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳೇ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮೊದಲು ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ ಸಿದ್ದಾಪುರ ಬಿ.ಬಿ.ಟಿ.ಸಿ. ಸಂಸ್ಥೆಯ ವತಿಯಿಂದ ಕಳ್ಳಿಚಂಡ ಬೋಪಣ್ಣ ನೇತೃತ್ವದಲ್ಲಿ 60 ಮಂದಿಯ ತಂಡ ಸ್ವಯಂ ಪ್ರೇರಣೆಯಿಂದ ಕಾರ್ಯಕ್ಕಿಳಿದಿದೆ. ಜಿಲ್ಲೆಯ ಇನ್ನಷ್ಟು ಸಂಘ ಸಂಸ್ಥೆಗಳು ಶ್ರಮದಾನ ನಡೆಸುವ ಮೂಲಕ ರಸ್ತೆ ಸಂಪರ್ಕ ಸುಧಾರಣೆಗೆ ಪ್ರಯತ್ನಿಸಬೇಕಾಗಿದೆ ಎಂದು ಬೋಪಣ್ಣ ಮನವಿ ಮಾಡಿದ್ದಾರೆ.