ಕುಶಾಲನಗರ, ಆ. 28: ತಾ. 16 ರಿಂದ 3 ದಿನಗಳ ಕಾಲ ನಮ್ಮ ಮನೆಯನ್ನು ಕೂಡ ಕಾವೇರಿ ಆವರಿಸಿತ್ತು. ಕುಶಾಲನಗರ ಗಡಿಭಾಗದ ನದಿ ತಟದಿಂದ ಸುಮಾರು 1 ಕಿಮೀ ಅಂತರದಲ್ಲಿದ್ದರೂ ಹಾರಂಗಿ - ಕಾವೇರಿ ನದಿ ಸಂಗಮದಿಂದ ಉಂಟಾದ ಪ್ರವಾಹದ ಹಿನ್ನೀರು ಮನೆ ಪ್ರವೇಶಿಸುತ್ತಿದ್ದಂತೆ ನೆಲ ಅಂತಸ್ತಿನಿಂದ ಮನೆಯ ಮಹಡಿಯಲ್ಲಿರುವ ಬಾಡಿಗೆದಾರರ ಮನೆಯ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಉಂಟಾಯಿತು.
ಮನೆಯಲ್ಲಿದ್ದ ಬೆಲೆಬಾಳುವ ಹಾಗೂ ನೀರಿನಿಂದ ನಾಶಗೊಳ್ಳುವ ವಸ್ತುಗಳನ್ನು ನಮ್ಮ ಸಹದ್ಯೋಗಿಗಳ ಸಹಾಯದೊಂದಿಗೆ ತಕ್ಷಣ ಸ್ಥಳಾಂತರಿಸುವಲ್ಲಿ ಯಶಸ್ಸು ಕಂಡೆವು.
ಮನೆಯಲ್ಲಿದ್ದ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳನ್ನು ಕೂಡ ಸ್ಥಳಾಂತರಿಸಿ ರಕ್ಷಣೆ ಮಾಡುವ ಕೆಲಸ ಕೂಡ ನಮ್ಮದಾಗಿತ್ತು.
ಸಂಜೆಯಾಗುತ್ತಲೇ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ದರೊಂದಿಗೆ ನದಿ ನೀರು ಮನೆಯ ಒಳಭಾಗದಲ್ಲಿ ಸುಮಾರು 4 ಅಡಿಗಿಂತಲೂ ಎತ್ತರ ಆವರಿಸಿದನ್ನು ಕಂಡು ಮನಸ್ಸಿನಲ್ಲಿ ಆತಂಕ ಮನೆಮಾಡಿತ್ತು.
ಈ ಸಂದರ್ಭ ತಡ ರಾತ್ರಿಯಲ್ಲಿ ಟಾರ್ಚ್ ಬೆಳಕಿನೊಂದಿಗೆ ನೀರಿನಲ್ಲಿ ಸಾಗಿ ಉಳಿದ ವಸ್ತುಗಳನ್ನು ಸಾಗಿಸಲು ಮನೆಗೆ ತೆರಳಿದಾಗ ಜಲಚರಗಳು ಹಾಗೂ ಕೆಲವು ಹಾವುಗಳು ನಮ್ಮತ್ತ ನೀರಿನಲ್ಲಿ ಸಾಗಿ ಬಂದಿದ್ದು ಇನ್ನೂ ಭಯ ಉಂಟುಮಾಡಿತ್ತು.
ಸುಮಾರು 10ಕ್ಕೂ ಅಧಿಕ ಹಾವುಗಳು ಮನೆಯ ಒಳಭಾಗ ಹೊರಭಾಗದಲ್ಲಿ ಓಡಾಡುತ್ತಿದ್ದ ದೃಶ್ಯ ಕಂಡು ಆತಂಕ ನಡುವೆ ಧೈರ್ಯಗುಂದದೆ ಹಲವು ಸಾಮಾನು ಸರಂಜಾಮುಗಳನ್ನು ಮೇಲಕ್ಕೆ ತರುವಲ್ಲಿ ಹರಸಾಹಸ ಪಡಬೇಕಾಯಿತು. ಇಡೀ ರಾತ್ರಿ ಮನಸ್ಸಿನಲ್ಲಿ ಭಯ ಮೂಡುವದರೊಂದಿಗೆ ನಿದ್ರೆ ಬಾರದೆ ಪ್ರವಾಹದ ಬಗ್ಗೆ ಚಿಂತೆಯಲ್ಲಿರು ವಂತೆಯೇ ಮುಂಜಾನೆಯಾಗಿತ್ತು.
ಮರುದಿನ ಮನೆಯ ಹೊರಭಾಗದಲ್ಲಿ ಸುತ್ತಮುತ್ತ ಎಲ್ಲೆಲ್ಲೂ ನೋಡಿದರೂ ನೀರಿನಿಂದ ಆವೃತಗೊಂಡ ನೆರೆ ಮನೆಗಳು, ಹೆದ್ದಾರಿ ರಸ್ತೆಯ ಬದಿಗೆ ನೀರು ಕಂಡು ತೆರಳುತ್ತಿದ್ದ ನೂರಾರು ಸಂಖ್ಯೆಯ ಜನರು ತಮ್ಮ ಮೊಬೈಲ್‍ನಲ್ಲಿ ಪರಿಸ್ಥಿತಿಯನ್ನು ಕ್ಲಿಕ್ಕಿಸುತ್ತಿದ್ದ ದೃಶ್ಯ ಮಾತ್ರ ಒಂದು ರೀತಿಯಲ್ಲಿ ನಮ್ಮನ್ನು ಅಣಕಿಸುವಂತಿತ್ತು.
ಈ ನಡುವೆ ಕುಶಾಲನಗರ ಸೇರಿದಂತೆ ಎಲ್ಲೆಡೆಗಳಿಂದ ಬಂದ ಸಾಂತ್ವನದ ಮಾತುಗಳು ಮಾತ್ರ ನಮ್ಮನ್ನು ಎದೆಗುಂದದೆ ಇರುವಂತೆ ಮಾಡಿದ್ದು ಮಾತ್ರ ನಿಜ.
ಮೂರು ದಿನಗಳ ಕಾಲ ಕಾವೇರಿ ನದಿ ನೀರು ನಮ್ಮ ಮನೆ ಒಳಗೆ ಹೊರಭಾಗದಲ್ಲಿದ್ದರೂ ನಮಗೆ ಕುಡಿಯಲು ಮಾತ್ರ ಬಾಟಲಿ ನೀರನ್ನು ಆಶ್ರಯಿಸಬೇಕಾಗಿತ್ತು.
- ವನಿತಾ ಚಂದ್ರಮೋಹನ್, ಪತ್ರಕರ್ತರು, ಕುಶಾಲನಗರ