ಕೂಡಿಗೆ, ಆ. 28: ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಸರ್ಕಾರದ ವತಿಯಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ 11.2 ಎಕರೆ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣ ಘಟಕದ ಕಾಮಗಾರಿಯು ಪ್ರಗತಿಯತ್ತ ಸಾಗುತ್ತಿದೆ.
ಎಂಟು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಮಾಜಿ ಸಚಿವ ಎ. ಮಂಜು ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ್ದರು. ರಾಜ್ಯ ಸರ್ಕಾರದ ಈ ಯೋಜನೆಯು ರೂ. 5 ಕೋಟಿ ವೆಚ್ಚದ್ದಾಗಿದ್ದು, ಕಾಮಗಾರಿಗೆ ಪಶು ಸಂಗೋಪನಾ ಇಲಾಖೆಯಿಂದ ರೂ. 3 ಕೋಟಿ ಬಿಡುಗಡೆಯಾಗಿದ್ದು, ಬಿಡುಗಡೆಯ ಹಣದಲ್ಲಿ ಮೇಕೆ ಹಾಲು ಉತ್ಪಾದನಾ ಘಟಕದ ಕಟ್ಟಡಗಳು ಇದೀಗ ಶೇ. 90 ಭಾಗದಷ್ಟು ಪೂರ್ಣಗೊಂಡಿವೆ.
ಮೇಕೆ ಹಾಲು ಉತ್ಪಾದನೆಯು ರಾಜ್ಯದಲ್ಲಿ ಬೀದರ್, ಮಂಗಳೂರು ಕಡೆಗಳಲ್ಲಿ ಖಾಸಗಿಯವರು ನಡೆಸುತ್ತಿದ್ದು, ಪ್ರಗತಿಯಲ್ಲಿ ಮುನ್ನಡೆದು ಮೇಕೆ ಹಾಲು ಆ ಭಾಗದ ಜನರಿಗೆ ಪ್ರಯೋಜನವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಯನ್ನು ರೂಪಿಸಿ ಹೆಚ್ಚು ವಿಸ್ತಾರವನ್ನು ಹೊಂದಿರುವ ಕೊಡಗು ಜಿಲ್ಲೆಯ ಕೂಡಿಗೆಯ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟದಲ್ಲಿ ಘಟಕವನ್ನು ಪ್ರಾರಂಭಿಸಲು ಚಿಂತನೆ ನಡೆಸಿದ ಹಿನ್ನೆಲೆ ಕಾಮಗಾರಿಯು ಉತ್ತಮವಾಗಿ ಪ್ರಗತಿಯಲ್ಲಿ ಸಾಗುತ್ತಿದೆ.
ಮುಂದಿನ ದಿನಗಳಲ್ಲಿ ಮೇಕೆಗಳಿಗೆ ಆಧುನಿಕ ರೀತಿಯ ಪಂಜರ ಹಾಗೂ ಹುಲ್ಲುಗಾವಲನ್ನು ನಿರ್ಮಿಸಲು ಈಗಾಗಲೇ ಗುರುತಿಸಲಾಗಿರುವ 112 ಎಕರೆ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿಯನ್ನು ನಿರ್ಮಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿಯೊಳಗೆ 50 ಜಾತಿಯ ಹುಲ್ಲಿನ ಹೈಬ್ರಿಡ್ ಹುಲ್ಲಿನ ತಳಿಗಳನ್ನು ಬೆಳೆಸುವ ಯೋಜನೆಯಿದೆ. ಅಲ್ಲದೆ ರಾಜ್ಯದಲ್ಲಿನ ಬರಗಾಲಪೀಡಿತ ಪ್ರದೇಶಗಳಿಗೆ ಇಲ್ಲಿನಿಂದ ಬೆಳೆಸಲಾದ ಹುಲ್ಲನ್ನು ಕಳಿಸುವ ಯೋಜನೆಯು ಇದಾಗಿದೆ. ಇದರ ಜೊತೆಯಲ್ಲಿ ಮಲೆನಾಡು ಗಿಡ್ಡ ರಾಸುಗಳು ಮತ್ತು ಸ್ಥಳೀಯ ಹಸುಗಳನ್ನು ಪ್ರೋತ್ಸಾಹಿಸುವ ಯೋಜನೆಯು ಇದಾಗಿದೆ. ಪಶು ಸಂಗೋಪನಾ ಇಲಾಖೆಯ ರಾಜ್ಯ ಉಪನಿರ್ದೇಶಕರು ಇದರ ಉಸ್ತುವಾರಿಯನ್ನು ವಹಿಸಿರುತ್ತಾರೆ.
ಬಿಡುಗಡೆಯಾಗಿರುವ ರೂ. 67 ಲಕ್ಷದಲ್ಲಿ ಇದೀಗ ಕಟ್ಟಡದ ಕಾಮಗಾರಿ ನಡೆದಿದೆ. ಇನ್ನುಳಿದ ರೂ. 8 ಲಕ್ಷ ವೆಚ್ಚದಲ್ಲಿ ಸುತ್ತಲು ಸಿಮೆಂಟ್ ಕಂಬದ ಬೇಲಿ, ಮೇಕೆಗಳಿಗೆ ಬೇಕಾಗುವ ಹುಲ್ಲು ಬೆಳೆಸಲು ಸಿದ್ಧತೆಗಳು ನಡೆಯುತ್ತಿವೆ. ಇದರ ಜೊತೆಯಲ್ಲಿ ಈ ಕೇಂದ್ರದಲ್ಲಿ ಈಗಾಗಲೇ 500 ಮೇಕೆ ಸಾಕಲು ವ್ಯವಸ್ಥೆಗಳನ್ನು ಮಾಡಲಾಗಿದೆ.
ಇದರ ಜೊತೆಯಲ್ಲಿ ಮೇಕೆ ಹಾಲು ಸಂಗ್ರಹದ ಶಿಥಿಲೀಕರಣ ಘಟಕ ಕಾಮಗಾರಿ ನಡೆಯಬೇಕಾಗಿದೆ. ಅಲ್ಲದೆ, ರಾಜ್ಯದಲ್ಲೇ ಪ್ರಪ್ರಥಮವಾಗಿರುವ ರಾಜ್ಯ ಸರ್ಕಾರದ ಈ ಯೋಜನೆಗೆ ರಾಜ್ಯ ಪಶುಪಾಲನ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಮೂಲಕ ಸಭೆ ನಡೆದು ಸರ್ಕಾರದಿಂದ ಅನುಮತಿ ಪಡೆದು ಮೇಕೆಗಳನ್ನು ರಾಜ್ಯ, ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ತರಿಸಿಕೊಂಡು ಅವುಗಳ ಸಾಕಾಣಿಕೆ ಮತ್ತು ಅಭಿವೃದ್ಧಿ ಪಡಿಸುವ ಬಗ್ಗೆ ರಾಜ್ಯ ಮಟ್ಟದಲ್ಲಿ ಸಭೆಗಳು ನಡೆದಿದೆ.
ಈ ಕೇಂದ್ರವನ್ನು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿರುವ ಜರ್ಸಿತಳಿ ಸಂವರ್ಧನಾ ಕೇಂದ್ರದ ಅಧೀನದಲ್ಲಿದ್ದು, ಇದರ ಜವಬ್ದಾರಿಯನ್ನು ಜರ್ಸಿತಳಿ ಸಂವರ್ಧನಾ ಕೇಂದ್ರವು ವಹಿಸಿಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಜರ್ಸಿತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕರನ್ನು ಸುದ್ದಿಗಾರರು ಮಾತನಾಡಿಸಿದಾಗ, ಕೇಂದ್ರಕ್ಕೆ ಬೇಕಾಗುವ ಹೆಚ್ಚು ಮೇಕೆಗಳು ಮತ್ತು ಸಾಕಾಣಿಕೆ ಮಾಡಲು ಬರಿಸಬಹುದಾದ ವೆಚ್ಚ ಹಾಗೂ ಬರುವ ಹಾಲಿನ ಉತ್ಪಾದನೆ ಮತ್ತು ಅದರ ಸದ್ಬಳಕೆಯ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮೇಲಾಧಿಕಾರಿಗಳ ಆದೇಶದನ್ವಯ ಕಾರ್ಯಪ್ರವೃತ್ತರಾಗಲು ಸಿದ್ಧರಿದ್ದೇವೆ ಎಂದು ಅಧಿಕಾರಿ ತಿಳಿಸಿದರು. - ಕೆ.ಕೆ. ನಾಗರಾಜಶೆಟ್ಟಿ