ಮಡಿಕೇರಿ, ಆ. 28 : ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬ, ವೈಯಕ್ತಿಕ ವಿವರಗಳನ್ನು (ಅವಲಂಬಿತರು, ಪ್ರಾಣ ಹಾನಿ, ಮನೆ ಹಾನಿ, ಜಾನುವಾರು ಹಾನಿ, ಬೆಳೆ ಹಾನಿ) ಹಾಗೂ ಪ್ರಕೃತಿ ವಿಕೋಪದಿಂದ ಮನೆಗೆ ಒಳಪಟ್ಟವರು ಸರ್ಕಾರದ ವತಿಯಿಂದ ಕೋರುವ ಇತರೆ ಸೌಲಭ್ಯಗಳು ಸಂಬಂಧಿಸಿದ ಕುಟುಂಬದ ಮುಖ್ಯಸ್ಥರು, ಸದಸ್ಯರು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಆಯಾ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರಿಂದ ತಾ. 31 ರೊಳಗಾಗಿ ಜಂಟಿ ತಪಾಸಣೆ ನಡೆಸಲಾಗುವದು. ಆದ ಕಾರಣ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಸ್ಥರು ತಾವು ಇರುವ ಶಿಬಿರಗಳಲ್ಲಿ ಅಥವಾ ಗ್ರಾಮಗಳಲ್ಲಿದ್ದು, ಪೂರಕ ಮಾಹಿತಿ ದಾಖಲೆಗಳೊಂದಿಗೆ ಸಲ್ಲಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
ನಿಗದಿತ ನಮೂನೆಯಲ್ಲಿರುವ ಮಾಹಿತಿ : ಕುಟುಂಬದ ಮುಖ್ಯಸ್ಥರ ಹೆಸರು, ವಯಸ್ಸು, ಗ್ರಾಮ, ಪಟ್ಟಣ, ಪೂರ್ಣ ವಿಳಾಸ, ಅವಲಂಬಿತರ ವಿವರ, ಗುರುತಿನ ಚೀಟಿ, ವೃತ್ತಿ, ವಿದ್ಯಾಭ್ಯಾಸ, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರಾಣ ಹಾನಿ ವಿವರ, ಮನೆ ಹಾನಿ ವಿವರ (ಕಚ್ಚಾ ಮನೆ, ಪಕ್ಕಾ ಮನೆ, ಪೂರ್ಣ, ತೀವೃ, ಭಾಗಶಃ ಹಾನಿ, ಸರ್ವೆ ಸಂ, ವಿಸ್ತೀರ್ಣ, ಅಂದಾಜು ನಷ್ಟ), ಜಾನುವಾರು ಹಾನಿ ವಿವರ(ಹಸು, ಎಮ್ಮೆ, ಆಡು, ಕುರಿ, ಇತ್ಯಾದಿ), ಬೆಳೆ ಹಾನಿಗೆ ಸಂಬಂಧಪಟ್ಟಂತೆ ಬೆಳೆಯ ವಿವರ(ಕಾಫಿ, ಭತ್ತ, ಕರಿಮೆಣಸು, ಏಲಕ್ಕಿ, ಜಮೀನಿನ ವಿಸ್ತೀರ್ಣ, ಸರ್ವೆ ಸಂ, ಅಂದಾಜು ನಷ್ಟ)ದ ಬಗ್ಗೆ ಮಾಹಿತಿ ನೀಡಬೇಕಿದೆ.
ಪ್ರಕೃತಿ ವಿಕೋಪದಿಂದ ಹಾನಿಗೊಳಪಟ್ಟವರು ಕೋರಿರುವ ಸೌಲಭ್ಯಗಳ ವಿವರ( ಸ್ವ ಸ್ಥಳದಲ್ಲಿ ಮನೆ ನಿರ್ಮಿಸಲು ನೆರವು, ತಾತ್ಕಾಲಿಕ ಮನೆ, ಸರ್ಕಾರದ ವಸತಿ ಯೋಜನೆಯಡಿ ಮನೆ, ಬದಲಿ ಜಮೀನು, ಜಮೀನಿನ ನಿರ್ವಹಣೆಗೆ ನೆರವು, ಸರ್ಕಾರದಿಂದ ಆರ್ಥಿಕ ನೆರವು, ಇತರ ಇಲಾಖೆ ಸೌಲಭ್ಯಗಳು) ಹಾಗೂ ಇತರೆ ಮಾಹಿತಿಗಳು ನಮೂನೆಯಲ್ಲಿದ್ದು, ಕುಟುಂಬದ ಮುಖ್ಯಸ್ಥರು, ಸದಸ್ಯರು ತಮ್ಮಲ್ಲಿರುವ ಪೂರಕ ಮಾಹಿತಿ, ದಾಖಲಾತಿಗಳನ್ನು ಜಂಟಿ ತಪಾಸಣೆ ವೇಳೆ ಅಧಿಕಾರಿಗಳಿಗೆ ಒದಗಿಸಬೇಕು ಎಂದು ಅವರು ತಿಳಿಸಿದ್ದಾರೆ.