ಕುಶಾಲನಗರ, ಆ 28: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ 50 ಕುಟುಂಬಗಳಿಗೆ ಅವಶ್ಯವಿರುವ ಆಹಾರ ಸಾಮಗ್ರಿಗಳನ್ನು ಯುವ ಬ್ರಿಗೇಡ್ ಕಾರ್ಯಕರ್ತರು ತಲಪಿಸಲು ಕಾರ್ಯ ಯೋಜನೆ ಹಮ್ಮಿ ಕೊಳ್ಳಲಾಗಿದೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಅವರು ಮಂಗಳವಾರ ಸಂತ್ರಸ್ತೆ ಪ್ರದೇಶಗಳಾದ ಮುಕ್ಕೋಡ್ಲು, ಇಗ್ಗೋಡ್ಲು, ಹಟ್ಟಿಹೊಳೆ, ಕಾಟಕೇರಿ, ಮದೆನಾಡು ವ್ಯಾಪ್ತಿಯಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಸರ್ವೆ ನಡೆಸಿದ ನಂತರ ಮಾತನಾಡಿ, ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಕೊಳ್ಳುವದರೊಂದಿಗೆ ತುರ್ತಾಗಿ ಯುವ ಬ್ರಿಗೇಡ್ ಮೂಲಕ ಅವಶ್ಯವಿರುವ ಆಹಾರ ಸಾಮಗ್ರಿ, ತಲಾ 2 ಸಾವಿರದಂತೆ ನಗದು ಹಣ ನೀಡಿ ಸಹಾಯ ಮಾಡಲಾಗುವದು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸಹಾಯಹಸ್ತ ಒದಗಿಸುವದು ಅಲ್ಲದೆ ಶಾಲಾ ಮಕ್ಕಳಿಗೆ ಬೇಕಾದ ಪುಸ್ತಕಗಳನ್ನು ನೀಡಲಾಗುವದು ಎಂದಿದ್ದಾರೆ.
ಇದೇ ಸಂದರ್ಭ ಮುಕ್ಕೋಡ್ಲು ಗ್ರಾಮದಲ್ಲಿ ಮನೆಯಲ್ಲಿ ಸಿಲುಕಿಕೊಂಡು ಮೃತಪಟ್ಟಿರುವ ಮುಕ್ಕಾಟಿರ ಉತ್ತಪ್ಪ ಅವರ ಪತ್ನಿ ತಾರ ಮತ್ತು ನೆರೆಮನೆಯಲ್ಲಿ ಗೋಡೆ ಕುಸಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪೋಷಕರಿಗೆ ತಲಾ ರೂ. 10 ಸಾವಿರ ತುರ್ತು ನೆರವು ನೀಡಲಾಯಿತು.
ಯುವ ಬ್ರಿಗೇಡ್‍ನ ನೂರಾರು ಕಾರ್ಯಕರ್ತರು ಜಿಲ್ಲೆಗೆ ಆಗಮಿಸಿ ಸ್ಥಳೀಯ ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಸೂಲಿಬೆಲೆ ತಿಳಿಸಿದ್ದಾರೆ.