ಕರಿಕೆ, ಆ. 28: ಕೊಡಗಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಯಾದ ಕರಿಕೆ-ಭಾಗಮಂಡಲ ರಸ್ತೆ ಮದ್ಯೆ ಬೃಹತ್ ಸರಕು ಸಾಗಾಣಿಕೆಯ ಲಾರಿಯೊಂದು ಹದಿಮೂರನೇ ಮೈಲು ಎಂಬಲ್ಲಿ ತಿರುವೊಂದರಲ್ಲಿ ಸಿಲುಕಿಕೊಂಡು ನಾಲ್ಕು ಗಂಟೆಗಳ ಕಾಲ ಆ್ಯಂಬ್ಯುಲೆನ್ಸ್, ಸರಕಾರಿ ಬಸ್ ಇತರ ವಾಹನಗಳ ಸಂಚಾರಕ್ಕೆ ಪರದಾಡುವ ಸ್ಥಿತಿ ಉಂಟಾದ ಘಟನೆ ಕರಿಕೆಯಲ್ಲಿ ನಡೆದಿದೆ.

ಈ ರಸ್ತೆ ಕಿರಿದಾಗಿದ್ದು, ನೂರಾರು ತಿರುವುಗಳನ್ನು ಹೊಂದಿದೆ. ಬಸ್ ಹಾಗೂ ಇತರ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಯೋಗ್ಯವಾಗಿದ್ದು, ಸಂಪಾಜೆ ರಸ್ತೆ ಬಂದ್ ಆದ ಕಾರಣ ಇದೀಗ ಈ ಮಾರ್ಗವಾಗಿ ವಾಹನ ದಟ್ಟಣೆ ಹೆಚ್ಚಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಭಾರೀ ವಾಹನಗಳ ಓಡಾಟ ನಿಷೇಧಿಸಿ ಆದೇಶ ಹೊರಡಿಸಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.