ಮಡಿಕೇರಿ: ಪ್ರಕೃತಿ ವಿಕೋಪದ ನಂತರ ಪಶುಗಳ ರಕ್ಷಣಾ ಕಾರ್ಯಾಚರಣೆಯು ಕೊಡಗಿನಲ್ಲಿ ಭರದಿಂದ ಸಾಗುತ್ತಿದ್ದು ಕೊಡಗಿನ ಪಶುವೈದ್ಯರ ತಂಡ ಪಶುರಕ್ಷಣಾ ಹಾಗೂ ಪಶು ಪೋಷಣೆಯ ಕಾರ್ಯದಲ್ಲಿ ದಿನನಿತ್ಯ ತೊಡಗಿಸಿಕೊಂಡಿದೆ.
ಮಡಿಕೇರಿ, ಸೋಮವಾರ ಪೇಟೆ ವಿಭಾಗ ಸೇರಿದಂತೆ ಪಶು ವೈದ್ಯರ ತಂಡವನ್ನೊಳಗೊಂಡ ಡಾ. ಚಿದಾನಂದ, ಡಾ. ತಮ್ಮಯ್ಯ, ಡಾ. ಪ್ರಸನ್ನ, ಡಾ. ದೇವರಾಜ್, ಡಾ. ರಮೇಶ್, ಡಾ. ಶಂತೇಶ್ ಸೇರಿದಂತೆ ಇನ್ಸ್‍ಪೆಕ್ಟರ್ ನವೀನ್ ಕುಮಾರ್ ಹಾಗೂ ಸುನೀಲ್ ಕುಮಾರ್ ಮತ್ತು ಇನ್ನಿತರರು ಮೂರು ದಿನಗಳಿಂದ ಪಶುಗಳಿಗೆ ಆಹಾರವನ್ನು ತೆಗೆದುಕೊಂಡು ಪಶುಪಾಲಕರಿಗೆ ಹಂಚುತ್ತಿದ್ದಾರಲ್ಲದೆ ಬೆಟ್ಟ-ಗುಡ್ಡಗಳಲ್ಲಿ ಸಿಲುಕಿರುವ ಪಶುಗಳನ್ನು ಪೋಷಿಸುತ್ತಿದ್ದಾರೆ.
“ಸರಕಾರವು ಕೂಡಿಗೆಯಲ್ಲಿ ಗೋ ಶಾಲೆಯೊಂದನ್ನು ತೆರುವು ಗೊಳಿಸಿದೆಯಲ್ಲದೆ ಸೋಮವಾರಪೇಟೆಯಲ್ಲಿ ಸಹಾಯವಾಣಿಯನ್ನು, ದುರಂತದಲ್ಲಿ ಸಿಲುಕಿರುವ ಪಶುಗಳ ಸಂರಕ್ಷಣೆಗೆ ಕಲ್ಪಿಸಿಕೊಟ್ಟಿದೆ. ಮೂರು ವೈದ್ಯರ ತಂಡಗಳು ಈ ಕಾರ್ಯಾ ಚರಣೆಯಲ್ಲಿ ಒಳಗೊಂಡಿದ್ದರೆ, ಇತರರು ಮನೆಮನೆಗೆ ತೆರಳಿ ಹಸು ಹಿಂಡಿಯನ್ನು ವಿತರಿಸುತ್ತಿದ್ದಾರೆ,” ಎಂದು ಡಾ. ತಮ್ಮಯ್ಯ ತಿಳಿಸಿದರು. ಇದಲ್ಲದೆ ಸುಮಾರು 10 ಹಸುಗಳನ್ನು ಮಕ್ಕಂದೂರು ಪ್ರದೇಶದಿಂದ ರಕ್ಷಿಸಿ ಈ ತಂಡವು ಗೋಶಾಲೆಗೆ ದಾಖಲಿಸಿದ್ದಾರೆ.
ಇದಷ್ಟೇಯಲ್ಲ, ಈ ವೈದ್ಯರ ತಂಡ ಅನೇಕ ಭೂಕುಸಿತ ಪೀಡಿತ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಪಶುಗಳಿಗೆ ಆಹಾರವನ್ನು ನೀಡುತ್ತಾರೆ.
ಇದೇ ಸೋಮವಾರದಂದು ಪಶು ವೈದ್ಯರ ಹಾಗೂ ಪಶು ಇನ್ಸ್‍ಪೆಕ್ಟರ್‍ಗಳ ತಂಡವೊಂದು ಭೂಕುಸಿತ ಪೀಡಿತ ಪ್ರದೇಶವಾದ 2ನೇ ಮೊಣ್ಣಂಗೇರಿಗೆ ಪಯಣ ಹೊರಟರು.
ಒಬ್ಬೊಬ್ಬರ ಕೈಯಲ್ಲಿ 5 ಕೆ.ಜಿ.ಯಷ್ಟು ಹಸು ಹಿಂಡಿಯನ್ನು ಹಿಡಿದು, 2ನೇ ಮೊಣ್ಣಂಗೇರಿಯ ಗ್ರಾಮಸ್ಥರು ಹಾಗೂ ಕೆಲವು ಪಶುಗಳ ಮಾಲೀಕರು ಮತ್ತು ಇನ್ನಿಬ್ಬರು ಪ್ರಸಾರ ಮಾಧ್ಯಮದ ಪತ್ರಕರ್ತರು (ಅವರೂ ಕೂಡ ಹಸುವಿನ ಹಿಂಡಿಯನ್ನು ಹಿಡಿದು) ತಾಜ್ ರೆಸಾರ್ಟ್‍ನಿಂದ 2ನೇ ಮೊಣ್ಣಂಗೇರಿಯತ್ತ ಕಾಲ್ನಡಿಗೆಯಲ್ಲಿ ಪಯಣ ಬೆಳೆಸಿದರು.
ಗುಡ್ಡದಲ್ಲಿ, ಕಾಡಿನ ಮಧ್ಯೆ, ಗ್ರಾಮಸ್ಥರ ಸಹಕಾರದಿಂದ ಸುಮಾರು 2 ಕಿ.ಮೀ. ನಡೆಯತ್ತಿದ್ದಂತೆ ಒಂದು ಮನೆ ತಲಪಿದರು. ಅಲ್ಲಿ 2 ಮೂಕ ಪ್ರಾಣಿಗಳು ಮನುಷ್ಯನ ಹಾದಿಯನ್ನೇ ಕಾಯುತ್ತಿದ್ದಂತೆ ಗೋಚರಿಸಿತು. ಮನುಷ್ಯರ ಸಪ್ಪಳ ಕೇಳಿದಾಕ್ಷಣ ಈ 2 ಶ್ವಾನಗಳು ಒಮ್ಮೆ ಅನುಮಾನದಿಂದ ಇನ್ನೊಮ್ಮೆ ಆನಂದದಿಂದ ತಂಡವನ್ನು ಸ್ವಾಗತಿಸಿದವು. ಹಲವಾರು ನಾಯಿಗಳು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದರು ಸರಕಾರದಿಂದ ಹಸುಗಳಿಗೆ ನೀಡುವ ಆಹಾರ ದೊರಕಿದೆಯೇ ಹೊರತು ಇತರ ಪಶುಗಳ ಆಹಾರ ಇನ್ನೂ ತಲಪಿಲ್ಲವೆಂದು ಪಶು ವೈದ್ಯರೊಬ್ಬರು ತಿಳಿಸಿದರು. “ಖಾಸಗಿ ಕಂಪೆನಿ ಯೊಂದು ಇತರ ಪಶುಗಳ ಆಹಾರವನ್ನು ಕೊಡಗಿನ ಭೂಕುಸಿತ ಪ್ರದೇಶಗಳಿಗೆ ತರಲಿದೆ,” ಎಂದು ಡಾ. ಶಂತೇಶ್ ನಂತರ ತಿಳಿಸಿದರು. ಹೇಗಾದರು, ಈ ಎರಡು ನಾಯಿಗಳಿಗೆ ತಂಡದ ಜೊತೆಯಿದ್ದ ಒಬ್ಬರು ತಂದಿದ್ದ ಆಹಾರವನ್ನು ನೀಡಿ ಸಂತೈಸಿದರು.
ಅಲ್ಲಿಂದ ಮುಂದುವರೆದು ಮುಂದಿನ ಮನೆಯಲ್ಲಿ ಹಸುಗಳು ವಾಸವಾಗಿದ್ದವು. ಅವುಗಳಿಗೆ ವೈದ್ಯರು ಹಿಂಡಿಯನ್ನು ನೀಡಿದರಷ್ಟೇಯಲ್ಲದೆ ಜೊತೆಗೆ ತೆರಳಿದ್ದ ಪ್ರಸಾರ ಮಾಧ್ಯಮದ ವರದಿಗಾರರಾದ ಗೋಪಾಲ್ ಸೋಮಯ್ಯ ದನದ ಕೊಟ್ಟಿಗೆಯ ಅಟ್ಟದ ಮೇಲೆ ಹತ್ತಿ ದನಗಳಿಗೆ ಒಣಗಿದ ಹುಲ್ಲನ್ನೂ ಹಾಸಿದರು. ಅಲ್ಲಿಂದ ಸ್ವಲ್ಪ ದೂರದಲ್ಲಿ ಹಸುವೊಂದು ಕುಳಿತೇ ಇತ್ತು, ಜನರನ್ನು ನೋಡಿದಾಗಲೂ, ಇತರ ಜಾನುವಾರುಗಳಿಗೆ ಹಿಂಡಿ ಹಾಕುವಾಗಲೂ ಕುಳಿತಿದ್ದ ಜಾಗದಿಂದ ಅಲುಗಾಡಲಿಲ್ಲ. ಇದಕ್ಕೆ ಕಾರಣ, ಈ ಹಸು ಒಂದು ಪುಟ್ಟ ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಇದರ ರಕ್ಷಣೆಗೆ ವೈದ್ಯರ ತಂಡ ಹಾಗೂ ಗೋಪಾಲ್ ಅವರು ಸಿದ್ಧವಾದಂತೆ ಧಾರಾಕಾರ ಮಳೆ ಆರಂಭವಾಯಿತು.
ಮಳೆಯನ್ನು ಲೆಕ್ಕಿಸದೆ ಈ ತಂಡವು ಹಗ್ಗದ ಸಹಾಯದಿಂದ ಹಸುವನ್ನು ರಕ್ಷಿಸಿ ಅದಕ್ಕೆ ಆಹಾರ ನೀಡಿದರು.
ಇದಲ್ಲದೆ ಹೆಚ್ಚಿನ ಹಿಂಡಿಯನ್ನು ಬಕೆಟ್ ಒಂದರಲ್ಲಿ ತುಂಬಿಸಿ ವೈದ್ಯರ ತಂಡ ಈ ಹಸುವಿಗೆ ಅಲ್ಲೇ ಚಿಕಿತ್ಸೆ ನೀಡಿದರು.
ಹೀಗೆ ದಾರಿಯುದ್ದಕ್ಕೂ ಇಡೀ 2ನೇ ಮೊಣ್ಣಂಗೇರಿ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲಾ ಜಾನುವಾರಗಳಿಗೆ ಆಹಾರವನ್ನು ನೀಡುತ್ತಾ, ಇಲ್ಲಿಯವರೆಗೂ ಮಾಧ್ಯಮವಾಗಲಿ, ಪೋಲೀಸ್ ಅಥವಾ ರಕ್ಷಣಾ ತಂಡವಾಗಲಿ ತೆರಳದೆ ಇರುವಂತಹ 2ನೇ ಮೊಣ್ಣಂಗೇರಿಯ ಭೂಕುಸಿತ ಪ್ರದೇಶಗಳಿಗೆ ಪಶುವೈದ್ಯರ ತಂಡ ತೆರಳಿತು.
“ನಾವು ಮುಂದಿನ ದಿನಗಳಲ್ಲಿ ದಾನಿಗಳಿಂದ ಇತರ ಪಶುಗಳಿಗೆ ಆಹಾರವನ್ನು ತೆಗೆದುಕೊಂಡು ಹೋಗಲಿದ್ದೇವೆ,” ಎಂದು ಡಾ. ಚಿದಾನಂದ್ ತಿಳಿಸಿದರು.
ಅಲ್ಲದೆ, ಈ ತಂಡಕ್ಕೆ ಜಿಲ್ಲಾಡಳಿತದಿಂದ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ನುಡಿದರು. “ಕೆಲವೊಂದು ಪ್ರದೇಶಗಳಿಗೆ ತೆರಳಲು ಅಸಾಧ್ಯವೆಂದು ತೋರಿದರೂ, ನಾವು ಅಲ್ಲಿಗೆ ತೆರಳಿ ಪಶುಗಳಿಗೆ ಪೋಷಣೆ ನೀಡುತ್ತೇವೆ. ಇನ್ನು ರಸ್ತೆ ಕಲ್ಪಿಸಿದ ನಂತರ ಇಂತಹ ಪಶುಗಳನ್ನು ಗೋಶಾಲೆಗೆ ದಾಖಲಿಸಬಹುದು,” ಎಂದು ಡಾ. ತಮ್ಮಯ್ಯ ಅಭಿಪ್ರಾಯಪಟ್ಟರು.
ಇವೆಲ್ಲದರ ಮಧ್ಯೆ ಗ್ರಾಮಸ್ಥರೊಬ್ಬರು ತಮ್ಮ ಮನೆಯ ನಾಯಿಯನ್ನು ರಕ್ಷಿಸಿ ಅವರೊಡನೆ ನಡೆಸಿಕೊಂಡು ಹೋಗುತ್ತಿದ್ದ ದೃಶ್ಯ ಮನಮುಟ್ಟುವಂತಿತ್ತು.
“ಯಾರಿಗಾದರೂ ಸಾಕುವವರಿಗೆ ನನ್ನ ನಾಯಿಯನ್ನು ಕೊಟ್ಟುಬಿಡುವೆ,” ಎಂದು ಅವರು ಉದ್ವೇಗದಿಂದ ನುಡಿದರು.