ಮಡಿಕೇರಿ, ಆ. 28: ಇಲ್ಲಿನ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಕಳೆದ 12 ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಭಾರತಿ ಘಟಕದ ಸಂತ್ರಸ್ತ ಪರಿಹಾರ ಕೇಂದ್ರವನ್ನು ಇಂದು ಜಿಲ್ಲಾಡಳಿತಕ್ಕೆ ವಹಿಸುವದರೊಂದಿಗೆ, ಇದುವರೆಗೆ ಆಸರೆ ಪಡೆದಿದ್ದ ಸಂತ್ರಸ್ತರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಸಂಘದ ಹಿರಿಯರಾದ ಡಾ. ಮನೋಹರ್ ಪಾಟ್ಕರ್, ಡಾ. ಜಯಲಕ್ಷ್ಮೀ ಪಾಟ್ಕರ್, ಸೇವಾ ಭಾರತಿ ಪ್ರಮುಖ್ ಕೆ.ಕೆ. ಮಹೇಶ್‍ಕುಮಾರ್ ಸೇರಿದಂತೆ ಜಿಲ್ಲಾಡಳಿತದ ಪರವಾಗಿ ಸೌಮ್ಯ ಪಾಲ್ಗೊಂಡಿದ್ದರು.ಸಂಘದ ಮಂಗಳೂರು ವಿಭಾಗ ಸಹ ಪ್ರಚಾರಕ್ ಉಮೇಶ್ ಈ ಸಂದರ್ಭ ಮಾತನಾಡುತ್ತಾ, ಕಷ್ಟ ಕಾಲದಲ್ಲಿ ಕಾಯಕದೊಂದಿಗೆ ಮನೋಸ್ಥೈರ್ಯ ನೀಡುವ ಕೆಲಸವನ್ನು ಸ್ವಯಂ ಸೇವಕರು ಎಲ್ಲ ರಾಷ್ಟ್ರೀಯ ವಿಪತ್ತುಗಳ ವೇಳೆ ಸ್ವಯಂ ಪ್ರೇರಿತರಾಗಿ ಮಾಡುತ್ತಾ ಬಂದಿರುವದಾಗಿ ನುಡಿದರು.ವಿಭಿನ್ನ ಪದ್ಧತಿಯ ಕೌಟುಂಬಿಕ ಜೀವನ ನಿರತರಾದ ನಾವು, ಪ್ರಸಕ್ತ ಪ್ರಾಕೃತಿಕ ವಿಕೋಪದಿಂದ ಅನಿವಾರ್ಯವಾಗಿ ಒಂದೆಡೆ ಆಸರೆ ಪಡೆದಿದ್ದರೂ, ಒಂದೇ ಕುಟುಂಬಕ್ಕೆ ಸೇರಿದವರಂತೆ ಪರಿಸ್ಥಿತಿಗೆ ಹೊಂದಿಕೊಂಡು ಭವಿಷ್ಯದ ಜೀವನದತ್ತ ಸಾಗಬೇಕಿದೆ ಎಂದು ತಿಳಿ ಹೇಳಿದರು.

ಕೆ.ಕೆ. ಮಹೇಶ್‍ಕುಮಾರ್, ನಿರಾಶ್ರಿತರ ಬದುಕಿಗೆ ಆಸರೆ ಕಲ್ಪಿಸುವ ದಿಸೆಯಲ್ಲಿ ಸೇವಾ ಭಾರತಿ ಬಳಗ ಮುಂದೆಯೂ ಜತೆಗಿರುವದಾಗಿ ಭರವಸೆ ನೀಡಿದರು. ನಗರದ ಜ. ತಿಮ್ಮಯ್ಯ ಶಾಲೆ, ಓಂಕಾರ ಸದನ, ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪಗಳಲ್ಲಿ ಇದುವರೆಗೆ ಆಸರೆ ಕಲ್ಪಿಸಿದಕ್ಕಾಗಿ ಆಯಾ ಆಡಳಿತ ಮಂಡಳಿ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಇದುವರೆಗೆ ಸೇವಾ ಭಾರತಿ ವ್ಯವಸ್ಥೆಯಲ್ಲಿ ಆಸರೆಯಲ್ಲಿದ್ದ 374 ಮಂದಿಯನ್ನು ಒಳಗೊಂಡ 168 ಕುಟುಂಬಗಳಿಗೆ ಈ ಸಂದರ್ಭ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ನೂರಕ್ಕೂ ಅಧಿಕ ಸ್ವಯಂ ಸೇವಕರು ಸೇವಾ ಕೇಂದ್ರದಲ್ಲಿ ಇದುವರೆಗೆ ತೊಡಗಿಸಿಕೊಂಡಿದ್ದು, ಜಿಲ್ಲೆಯ ವಿವಿಧೆಡೆಗಳಲ್ಲಿ ಸಂಕಷ್ಟದಲ್ಲಿದ್ದ ಮಂದಿಯ ರಕ್ಷಣೆಗೆ 300ಕ್ಕೂ ಅಧಿಕ ಆರೆಸ್ಸೆಸ್ ಸ್ವಯಂ ಸೇವಕರು ಸೇವಾ ಭಾರತಿ ತಂಡದೊಂದಿಗೆ ಕೈಜೋಡಿಸಿದ್ದರು. ಇಲ್ಲಿಂದ ನಿರಾಶ್ರಿತರನ್ನು ಕುಶಾಲನಗರದ ವಾಲ್ಮೀಕಿ ಭವನ ಹಾಗೂ ಇತರೆಡೆಗಳಿಗೆ ಬಸ್ ಹಾಗೂ ಇತರ ವಾಹನಗಳಲ್ಲಿ ಜಿಲ್ಲಾಡಳಿತದಿಂದ ಕಳುಹಿಸಿಕೊಡಲಾಯಿತು.

ಸಂಘದ ಪ್ರಚಾರಕ್ ಅವಿನಾಶ್ ಗೀತೆಯೊಂದಿಗೆ ಸಂಪರ್ಕ ಪ್ರಮುಖ್ ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿದರು.