ಮಡಿಕೇರಿ, ಆ. 28: ಜಿಲ್ಲೆಯಲ್ಲಿ ಮಳೆ ಪ್ರವಾಹ ದುರಂತದಲ್ಲಿ ಕೊಚ್ಚಿಹೋದ ಪ್ರದೇಶದಲ್ಲಿ ಮಡಿಕೇರಿ ಸನಿಹದ ಹೆಬ್ಬೆಟ್ಟಗೇರಿಯೂ ಒಂದು. ಇತ್ತೀಚೆಗೆ ಆ ಪ್ರದೇಶದಲ್ಲಿ ಚಂದ್ರ ಪೂಜಾರಿ ಎಂಬವರ ಮೃತ ದೇಹವನ್ನು ಭೂಮಿಯ ಅಡಿಯಿಂದ ಮೇಲಕ್ಕೆತ್ತಿ ಹೊರತರಲಾಯಿತು.

ಮೇಲ್ನೋಟಕ್ಕೆ ಎನ್.ಡಿ.ಆರ್. ಎಫ್. ತಂಡದ ಕಾರ್ಯಾಚರಣೆ ಎಂಬದು ಕೇಳಿಬಂದ ವಿದ್ಯಮಾನ. ಆದರೆ ಜಿಲ್ಲೆಯ ಬಹುತೇಕ ಕಡೆ ಕೊಡಗಿನ ಪೊಲೀಸರು, ಸ್ಥಳೀಯ ಸಂಘ-ಸಂಸ್ಥೆಗಳ ಯುವಕರು, ಕೊಡಗಿನ ಮಾದಪ್ಪ ಎಂಬ ಸೇನಾಧಿಕಾರಿಯೊಬ್ಬರು ಹೀಗೆ ಹತ್ತು ಹಲವಾರು ಮಂದಿ ಹೆಗಲಿಗೆ ಹೆಗಲುಕೊಟ್ಟು ಕೈಜೋಡಿಸಿದ ಹಿನ್ನೆಲೆ ಮಾತ್ರ ಕಾರ್ಯಾಚರಣೆಗಳು ಯಶಸ್ವಿಯಾಗಲು ಸಾಧ್ಯವಾಯಿತು. ಅಲ್ಲದೆ ಅಲ್ಲಲ್ಲಿ ಕೆಸರಿನಡಿ ಭೂಮಿ ಯೊಳಗೆ ಹೂತು ಹೋಗಿದ್ದ ಶವಗಳನ್ನು ಮೇಲಕ್ಕೆತ್ತಲು ಸಾಧ್ಯವಾಯಿತು.

ಇದೇ ರೀತಿಯ ಸಂದರ್ಭ, ಸನ್ನಿವೇಶ ಹೆಬ್ಬೆಟ್ಟಗೇರಿಯಲ್ಲಿ ಚಂದ್ರ ಪೂಜಾರಿ ಅವರ ಶವವನ್ನು ಪತ್ತೆ ಮಾಡುವ ಕಾರ್ಯಾಚರಣಾ ತಂಡಕ್ಕೆ ಎದುರಾಯಿತು. ಭೂಕುಸಿತದ ಪ್ರದೇಶದಲ್ಲಿ ಬಹಳಷ್ಟು ದೂರ ತೆರಳಿದ ಎನ್.ಡಿ.ಆರ್.ಎಫ್. ತಂಡ ಮೃತದೇಹ ಪತ್ತೆ ಮಾಡುವದು ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಸುಸ್ತಾಗಿ ಹೋಯಿತು. ಆ ಸಂದರ್ಭ ಕೊಡಗಿನ ಪೊಲೀಸ್ ತಂಡ ಛಲಬಿಡದೆ ಧೈರ್ಯ, ಸಾಹಸದಿಂದ ಮುನ್ನುಗ್ಗಿತ್ತು. ಶ್ವಾನದಳದ ಪ್ರಮುಖರುಗಳಾದ ಜಿತೇಂದ್ರ, ಮನ್‍ಮೋಹನ್, ಸುಕುಮಾರ್, ಶಿವ ಇವರುಗಳು ತಲಕಾಡುವಿನ ಎಸ್.ಐ. ನಂದೀಶ್ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ವಿಭಾಗದ ಪೊಲೀಸ್ ಅಧಿಕಾರಿ ರಾಕೇಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮುಂದುವರಿಸಿದರು. ಸುಮಾರು 2 ಸಾವಿರ ಅಡಿ ಕೆಳಭಾಗಕ್ಕೆ ತೆರಳು ವಂತಹ ಅನಿವಾರ್ಯ ಸನ್ನಿವೇಶ ಈ ತಂಡಕ್ಕೆ ಎದುರಾಯಿತು. ಭಾರೀ ಪ್ರಪಾತದಲ್ಲಿ ಇಳಿಯುತ್ತಿದ್ದಂತೆ ನೆಲಕ್ಕೆ ಕಾಲಿಟ್ಟೊಡನೆ ಕಾಲುಗಳು ಹೂತು ಹೋಗುತ್ತಿದ್ದು, ಇಳಿಯುವದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣ ವಾಯಿತು. ಧೈರ್ಯಗೆಡದ ತಂಡ ಅಲ್ಲಲ್ಲಿ ಮರದ ಕೊಂಬೆಗಳನ್ನು ಕಡಿದು ನೆಲಕ್ಕೆ ಎಸೆದು ಅದರ ಮೇಲೆ ಹೆಜ್ಜೆ ಇಟ್ಟು ಮುನ್ನುಗ್ಗಿದ್ದು, ದಾರಿ ಮಧ್ಯದಲ್ಲಿ ಅಲ್ಲಲ್ಲಿ ಸತ್ತು ಬಿದ್ದ ಜಾನು ವಾರುಗಳ ಶರೀರಗಳು, ಕೋಳಿಗಳು, ಹೂತು ಹೋದ ಅಡುಗೆ ಸಿಲಿಂಡರ್ ಗಳೂ ಕಂಡು ಬಂದವು. ಕೊನೆಗೆ ಒಂದು ಕಿರಿದಾದ ನೀರು ಹರಿಯುವ ಕೊಲ್ಲಿ ಸಿಕ್ಕಿದ್ದು, ಈ ಕಿರಿದಾದ ಕೊಲ್ಲಿಯಲ್ಲೇ ನಡೆದು ಪೊಲೀಸ್ ತಂಡ ತಳಭಾಗಕ್ಕೆ ತಲಪಿತು.

ಅಷ್ಟರಲ್ಲಿ ಶ್ವಾನಗಳು ಕಿರುಚಲು ಪ್ರಾರಂಭಿಸಿ ಸುತ್ತಲೂ ಓಡಾಡಿದವು. ಆ ಸ್ಥಳದಲ್ಲಿ ಒಂದು ಬೆರಳು ಭೂಮಿಯ ಮೇಲೆ ಕಂಡು ಬಂದಿತು. ಮಣ್ಣನ್ನು ಸರಿಸಿ ನೋಡಿದಾಗ ಕೈ ಗೋಚರವಾಯಿತು. ನಿಧಾನವಾಗಿ ಮೃತ ದೇಹವನ್ನು ಮೇಲಕ್ಕೆತ್ತುವಾಗ ನಾಪತ್ತೆಯಾಗಿದ್ದ ಚಂದ್ರ ಪೂಜಾರಿ ಅವರದ್ದು ಎಂಬದು ಕಂಡುಬಂದಿತು.

ಅಷ್ಟರಲ್ಲಿ ಎನ್.ಡಿ.ಆರ್.ಎಫ್. ತಂಡ ನಿಧಾನವಾಗಿ ಪೊಲೀಸ್ ತಂಡವನ್ನು ಹಿಂಬಾಲಿಸಿ ಶವವನ್ನು ತರಲು ದಾರಿಗೋಸ್ಕರ ತಮ್ಮಲ್ಲಿದ್ದ ಯಂತ್ರಗಳಿಂದ ಮರಗಳನ್ನು ಕತ್ತರಿಸಿದರು. ಪೊಲೀಸ್ ತಂಡ ತಮ್ಮಲ್ಲಿದ್ದ ಹಗ್ಗವನ್ನು ಬಳಸಿ ಅಲ್ಲಲ್ಲಿ ಅದನ್ನೇ ಆಧಾರವಾಗಿಸಿಕೊಂಡು ಮೃತದೇಹವನ್ನು ಮೇಲ್ಭಾಗಕ್ಕೆ ತಂದರು.